ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ನಾವ್ಯಾರೂ ಆಪರೇಷನ್ ಕಮಲದ ಬಗ್ಗೆ ಚಕಾರವನ್ನೂ ಎತ್ತಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಹಾಗೂ ಟೀಂ ಅನಗತ್ಯ ಆರೋಪ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ನಾಟಕ ಮಂಡಳಿ ಬಿಜೆಪಿಯ ಹೆಸರು ಕೆಡಿಸುತ್ತಿದೆ. ಡಿಕೆಶಿ & ಕಂಪನಿಯಿಂದ ಆಪರೇಷನ್ ಕಮಲದ ಬಗ್ಗೆ ಸುಳ್ಳು ಹೇಳಿಕೆ ಕೊಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
2019ರಲ್ಲಿ ಅನಿವಾರ್ಯವಾಗಿ ಆಪರೇಷನ್ ಕಮಲ ಮಾಡಿದ್ವಿ. ಡಿ.ಕೆ.ಶಿವಕುಮಾರ್ ಅವರ ಸರ್ವಾಧಿಕಾರಿ ಧೋರಣೆ, ಸೊಕ್ಕಿನ ವರ್ತನೆಗೆ ಸರ್ಕಾರವನ್ನು ಕೆಡವಿದ್ವಿ. ಆದರೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ವಿರುದ್ಧ ನಾವು ಮಾಡಿಲ್ಲ ಎಂದು ಹೇಳಿದರು. ಈಗ ಯಾವುದೇ ಆಪರೇಷನ್ ಕಮಲದ ಬಗ್ಗೆಯೂ ಚರ್ಚೆ ಮಾಡುತ್ತಿಲ್ಲ. ಆದರೆ ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಬೆಳಗಾವಿ ರಾಜಕಾರಣ, ಡಿ.ಕೆ.ಶಿವಕುಮಾರ್ ಅವರಿಂದಲೇ ಸರ್ಕಾರ ಬೀಳಲಿದೆ. ಮಹಾರಾಷ್ಟ್ರ ರಾಜಕಾರಣ ಮಾದರಿ ಇಲ್ಲಿಯೂ ಆಗಬಹುದು. ಲಾಟರಿ ಮಂತ್ರಿ, ಲಾಟರಿ ಶಾಸಕರಿದ್ದರೆ ಅದೇ ಪರಿಸ್ಥಿತಿ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.