ರಮೇಶ್ ಜಾರಕಿಹೊಳಿ ಅವರ ಸಿಡಿ ಬಿಡುಗಡೆಯಾದ 10 ದಿನಗಳ ನಂತರ ದೂರು ನೀಡಲಾಗಿದೆ. ನನ್ನ ವಿರುದ್ಧ ಸಂಚು ನಡೆಸಲಾಗಿದೆ ಎಂದು ಆಪ್ತನ ಮೂಲಕ ರಮೇಶ್ ಜಾರಕಿಹೊಳಿ ದೂರು ನೀಡಿದ್ದು ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಎಸ್ಐಟಿಗೆ ಪ್ರಕರಣ ವರ್ಗಾವಣೆಯಾಗಿದ್ದು ತನಿಖೆ ಮುಂದುವರಿಸಲಾಗಿದೆ. ಹಲವರನ್ನು ವಶಕ್ಕೆ ಪಡೆಯಲಾಗಿದೆ. ಇದೊಂದು ದೊಡ್ಡ ರಾಜಕೀಯ ಷಡ್ಯಂತ್ರ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದು, ರಾಜಕೀಯವಾಗಿ ನನ್ನನ್ನು ತುಳಿಯಲು ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಡಿ ಬಹಿರಂಗವಾದ ನಂತರ ನಾಪತ್ತೆಯಾಗಿದ್ದ ಯುವತಿ, ರಮೇಶ ಜಾರಕಿಹೊಳಿ ದೂರು ನೀಡಿದ ಬೆನ್ನಲ್ಲೇ ಪ್ರತ್ಯಕ್ಷವಾಗಿದ್ದಾರೆ. ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ಯುವತಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ರಮೇಶ್ ಜಾರಕಿಹೊಳಿ ಅವರೇ ವಿಡಿಯೋ ಮಾಡಿಕೊಂಡಿದ್ದಾರೆ. ಅವರೇ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನಡುವೆ ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ನನ್ನ ಮಾನ ಹರಾಜಾಗಿದ್ದು ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನನಗೆ ರಕ್ಷಣೆ ಒದಗಿಸಬೇಕು ಎಂದು ವೀಡಿಯೋದಲ್ಲಿ ಯುವತಿ ಹೇಳಿಕೊಂಡಿದ್ದು, ಘಟನೆ ಬಳಿಕ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಈ ಪ್ರಕರಣದಲ್ಲಿ ಯುವತಿ ದೂರು ನೀಡಿರಲಿಲ್ಲ. ಆದರೆ, ಬೆಳವಣಿಗೆಗಳನ್ನು ಗಮನಿಸಿದರೆ ವ್ಯವಸ್ಥಿತವಾಗಿ ಎಲ್ಲವನ್ನು ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೆಲಸ ಕೊಡಿಸುವುದಾಗಿ ರಮೇಶ್ ಜಾರಕಿಹೊಳಿ ಆಮಿಷವೊಡ್ಡಿದ ಬಗ್ಗೆ ಆಕೆ ಹೇಳಿಕೊಂಡಿದ್ದಾಳೆ. ಅಲ್ಲದೆ, ರಕ್ಷಣೆಗಾಗಿ ಗೃಹಸಚಿವರಿಗೆ ಮನವಿ ಮಾಡಿದ್ದಾಳೆ. ಈ ಬೆಳವಣಿಗೆಗಳನ್ನು ಗಮನಿಸಿದಾಗ ಆಕೆಯೇ ಮುಂದಿನ ದಿನಗಳಲ್ಲಿ ದೂರು ನೀಡುವ ಸಾಧ್ಯತೆ ಕೂಡ ಇದೆ.
ಯುವತಿ ಹೇಳಿಕೆ ಹೊರಬಂದ ನಂತರ ರಮೇಶ್ ಜಾರಕಿಹೊಳಿ, ನಾನು ನಿರಪರಾಧಿ, ಸತ್ಯ ಸಾಬೀತುಪಡಿಸುತ್ತೇನೆ. ನನ್ನ ವಿಡಿಯೋವನ್ನು ನಾನೇ ಬಿಡುಗಡೆ ಮಾಡುತ್ತೇನೆಯೇ ಎಂದು ಪ್ರಶ್ನಿಸಿದ್ದು, ಶೀಘ್ರವೇ ಸತ್ಯ ಸಾಬೀತುಪಡಿಸುತ್ತೇನೆ. ನಾನು ದೂರು ನೀಡಿದ ಅರ್ಧ ಗಂಟೆಯಲ್ಲಿ ಯುವತಿ ವಿಡಿಯೋ ಬಂದಿದೆ ಎಂದರೆ ಕಾಣದ ಕೈಗಳು ಹೇಗೆ ಕೆಲಸ ಮಾಡುತ್ತವೆ ನೋಡಿ ಎಂದು ಹೇಳಿದ್ದಾರೆ. ಸಮಗ್ರ ತನಿಖೆ ನಡೆದರೆ ಸತ್ಯ ಬಯಲಿಗೆ ಬರಲಿದೆ ಎನ್ನುವುದು ಜಾರಕಿಹೊಳಿ ಅಭಿಪ್ರಾಯವಾಗಿದೆ.