ಬೆಂಗಳೂರು: ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ಸಿಡಿ ಪ್ರಕರಣದ ವಿಚಾರಣೆಗೆ ದೂರುದಾರ ದಿನೇಶ್ ಕಲ್ಲಹಳ್ಳಿ ಗೈರುಹಾಜರಾಗಿದ್ದಾರೆ. ಭದ್ರತೆ ಕಾರಣ ಅವರು ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ.
ಇನ್ನು ರಮೇಶ್ ಜಾರಕಿಹೊಳಿ ಅವರು ಮೊನ್ನೆಯಿಂದ ಯಾರನ್ನು ಭೇಟಿಯಾಗಿಲ್ಲ. ಅಜ್ಞಾತ ಸ್ಥಳದಲ್ಲಿ ಇರುವ ಶಾಸಕ ರಮೇಶ ಜಾರಕಿಹೊಳಿ ಬೆಂಗಳೂರಿನಲ್ಲೇ ಇದ್ದರೂ ಯಾರನ್ನು ಭೇಟಿಯಾಗಿಲ್ಲ. ಇಂದು ಕೆಲವು ಶಾಸಕರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
ದಿನೇಶ್ ಕಲ್ಲಹಳ್ಳಿ ವಿರುದ್ಧ ಸೋಮವಾರ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಲು ರಮೇಶ್ ಜಾರಕಿಹೊಳಿ ನಿರ್ಧರಿಸಿದ್ದಾರೆ. 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು. ಈಗಾಗಲೇ ವಕೀಲರೊಂದಿಗೆ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದ್ದು ಸೋಮವಾರ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಿದ್ದಂತೆ ವಿಡಿಯೋ ಹಿಂದೆ ಯಾರಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಇದರ ಹಿಂದೆ ಸಂತ್ರಸ್ತೆಗೆ ನ್ಯಾಯ ಕೊಡಿಸುವ ಉದ್ದೇಶ ಮಾತ್ರವಿಲ್ಲ ಎಂದು ಹೇಳಲಾಗಿದೆ.
ಸಚಿವರಾದವರೂ ಸೇರಿ ಮೂವರು ಪ್ರಭಾವಿಗಳ ವಿಡಿಯೋ ಇದೆ ಎಂದು ಹೇಳಿ ಬ್ಲಾಕ್ ಮೇಲ್ ಮಾಡುತ್ತಿರುವ ದಿನೇಶ್ ಕಲ್ಲಹಳ್ಳಿ ಅವರ ವಿರುದ್ಧ ಕ್ರಮಕೈಗಗೊಳ್ಳಬೇಕೆಂದು ಒತ್ತಾಯಿಸಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಕುಮಾರ್ ದೂರು ನೀಡಿದ್ದಾರೆ.
ಸಂತ್ರಸ್ತೆ ದೂರು ನೀಡಿಲ್ಲದ ಕಾರಣ ಅವರ ಹೇಳಿಕೆಯೂ ಮುಖ್ಯವಾಗಿದ್ದು, ಪೊಲೀಸರು ಈ ನಿಟ್ಟಿನಲ್ಲಿ ಆಕೆಯನ್ನು ಪತ್ತೆ ಮಾಡಿ ಹೇಳಿಕೆ ಪಡೆಯಲು ಮುಂದಾಗಿದ್ದಾರೆ.
ಇನ್ನು ರಮೇಶ ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನಕ್ಕೆ ಬಾಲಚಂದ್ರ ಜಾರಕಿಹೊಳಿ ಅವರನ್ನು ನೇಮಿಸುವ ಬಗ್ಗೆ ಚರ್ಚೆ ನಡೆದಿದೆ. ಇದರೊಂದಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಲು ಜಿಲ್ಲೆಯ ಕೆಲವು ಸಚಿವರು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಇಂತಹ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಅವರ ಜೊತೆಯಾಗಿರಲು ಮಿತ್ರಮಂಡಳಿ ಸಚಿವರು, ಬಿಜೆಪಿ ಶಾಸಕರು ಮುಂದಾಗಿದ್ದಾರೆ. ಅವರ ಪರವಾಗಿ ಹೇಳಿಕೆ ನೀಡಿದ ಸಚಿವರು, ಶಾಸಕರು, ರಮೇಶ್ ಬೆಂಬಲಕ್ಕೆ ನಿಂತಿದ್ದು, ಧೈರ್ಯ ಹೇಳಿದ್ದಾರೆ.