
ಬೆಳಗಾವಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಇಂದು ಒಬ್ಬರ ಸಿಡಿ ಹೊರಬಂದಿದೆ. ಮುಂದೆ ಸಿದ್ದರಾಮಯ್ಯ ಸಿಡಿಯೂ ಹೊರಬರಬಹುದು ಎಂದು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಇಂದು ಒಬ್ಬರಿಗೆ ಆಗಿದೆ. ಮುಂದೆ ಸಿಎಂ ಸಿದ್ದರಾಮಯ್ಯನವರಿಗೂ ಆಗಬಹುದು. ಮೊದಲಿನಿಂದಲೂ ನಾನು ಸಿಡಿ ಬಗ್ಗೆ ಹೇಳಿಕೊಂಡೇ ಬಂದಿದ್ದೇನೆ. ಆಗ ಎಲ್ಲರೂ ನನ್ನ ಮಾತು ನಿರ್ಲಕ್ಷ್ಯ ಮಾಡಿದರು. ಇಂದು ಒಬ್ಬರಿಗೆ ಆಗಿದೆ. ಮುಂದೆ ಸಿದ್ದರಾಮಯ್ಯ, ಪರಮೇಶ್ವರ್ ಅವರಿಗೂ ಆಗಬಹುದು ಅವರ ಸಿಡಿಯೂ ಹೊರಬರಬಹುದು ಹಾಗಾಗಿ ಈ ನಿಟ್ಟಿನಲ್ಲಿ ಎಲ್ಲದಕ್ಕೂ ಅಂತ್ಯ ಹಾಡಬೇಕು ಎಂದು ಹೇಳಿದರು.
ನಾನು ಸಿಎಂ ಸಿದ್ದರಾಮಯ್ಯನವರಿಗೆ, ಗೃಹ ಸಚಿವ ಪರಮೇಶ್ವರ್ ಅವರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಪಕ್ಷಾತೀತವಾಗಿ ಇಂತಹ ಪ್ರಕರಣಗಳಿಗೆ ಇತಿಶ್ರೀ ಹಾಡಬೇಕು ಎಂದು ಮನವಿ ಮಾಡಿದರು.