
ಬೆಳಗಾವಿ: ಸೋತವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿದರೂ ಬಿಜೆಪಿಗೆ ನಿಷ್ಠೆ ತೋರಿಸಲಿಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆ ಅಥಣಿಯಲ್ಲಿ ಸಮಾವೇಶ ನಡೆಸಿದ ರಮೇಶ ಜಾರಕಿಹೊಳಿ, ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೀಡೆ ಹೋಗಿದೆ. ಇದರಿಂದ ನಮಗೆ ಒಳ್ಳೆಯ ಕಾಲ ಶುರುವಾಗಿದೆ. ಅಥಣಿಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ.
ರಮೇಶ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಗೆ ಹೋಗುತ್ತಾನೆ ಎನ್ನುವುದು ಸವದಿ ತಲೆಯಲ್ಲಿತ್ತು. ಆದರೆ ನನಗೆ ಸಚಿವ ಸ್ಥಾನ ಸಿಗದಿದ್ದರೂ ಪಕ್ಷದಲ್ಲಿದ್ದೆ. ಇಂದು ನನಗೆ ಸಂತೋಷವಾಗಿದೆ. ಉದ್ದ ಅಂಗಿ ಹಾಕಿದವರು ಹೊರಗೆ ಹೋಗಿದ್ದಾರೆ. ಬಿದ್ದವರನ್ನು ಉಪಮುಖ್ಯಮಂತ್ರಿ ಮಾಡಿದರೂ ನಿಷ್ಠೆ ತೋರಿಸಲಿಲ್ಲ. ಇವತ್ತು ನಮ್ಮನ್ನು ಬಿಟ್ಟು ಹೋಗಿದ್ದಾರೆ. ನಮಗೆ ಒಳ್ಳೆಯದೇ ಆಯಿತು ಎಂದರು.
ರಾಜ್ಯ ಮತ್ತು ರಾಷ್ಟ್ರದ ಬಿಜೆಪಿ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಉದ್ದ ಅಂಗಿಯವನನ್ನು ನೀವು ಮನೆಗೆ ಕಳುಹಿಸಬೇಕು. ಯಾವುದೇ ದಬ್ಬಾಳಿಕೆಗೆ ಅಂಜಬೇಡಿ. ಲಕ್ಷ್ಮಣ ಸವದಿ ನಮ್ಮ ಪಕ್ಷದಲ್ಲಿದ್ದರು ಎಂದು ನಾನು ಸುಮ್ಮನಿದ್ದೆ. ಇನ್ನು ಮೇಲೆ ಅಥಣಿ ಕ್ಷೇತ್ರಕ್ಕೆ ಬರುತ್ತೇನೆ, ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ.