ಬೆಳಗಾವಿ: ನನ್ನ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇ-ಮೇಲ್ ಮೂಲಕ ಪತ್ರ ಕಳುಹಿಸಿರುವುದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಇ- ಮೇಲ್ ಮೂಲಕ ಮನವಿ ಮಾಡಿದ್ದು, ಶೀಘ್ರವೇ ಬೆಂಗಳೂರಿಗೆ ತೆರಳಿ ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
2021ರ ಮಾರ್ಚ್ 13ರಂದು ಬೆಂಗಳೂರಿನ ಮತ್ತಿಕೆರೆಯಲ್ಲಿ ವಿಡಿಯೋ ಡೌನ್ಲೋಡ್ ಮಾಡಿ ಸರ್ವರ್ ಮೂಲಕ ರಷ್ಯಾ, ದುಬೈ, ಇಂಗ್ಲೆಂಡ್ ನಲ್ಲಿ ವೆಬ್ಸೈಟ್ ನಲ್ಲಿ ವಿಡಿಯೋ ಬಿಡುಗಡೆ ಮಾಡಲಾಗಿದೆ. ಪ್ರಭಾವಿ ನಾಯಕನ ಕೈವಾಡ ಇದರ ಹಿಂದೆ ಇದ್ದು ಇದನ್ನು ಪತ್ತೆ ಹಚ್ಚಲು ಸಿಬಿಐನಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ನನ್ನ ಸಿಡಿ ಮಾಡಿಸಿದ್ದಾರೆ ಎನ್ನುವುದಕ್ಕೆ ನನ್ನ ಬಳಿ ದಾಖಲೆಗಳಿದ್ದು, ಅವುಗಳನ್ನು ಸಿಬಿಐ ಅಧಿಕಾರಿಗಳಿಗೆ ಕೊಡುತ್ತೇನೆ. ಕಾಂಗ್ರೆಸ್ ನವರು ಆರೋಪ ಮಾಡಿರುವಂತೆ ನನ್ನ ಬಳಿ ದಾಖಲೆ ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದಲೇ ದೂರವಿರುತ್ತೇನೆ. ಅಲ್ಲದೆ ಡಿ.ಕೆ. ಶಿವಕುಮಾರ್ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ವಹಿಸದ ಬಗ್ಗೆ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ ಅಲ್ಲೇ ಇರುವುದು ಕ್ಲೈಮ್ಯಾಕ್ಸ್ ಎಂದು ಟ್ವಿಸ್ಟ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ನನ್ನ ಮನೆಯ ಮುಂದೆ ಅಶ್ಲೀಲ ಪದ ಇರುವ ಪೋಸ್ಟರ್ ಅಂಟಿಸಿದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲ, ಡಿ.ಕೆ. ಶಿವಕುಮಾರ್ ಸಾಕಿದ ಗೂಂಡಾಗಳು. ಡಿ.ಕೆ. ಶಿವಕುಮಾರ್ ಕೊತ್ವಾಲ್ ರಾಮಚಂದ್ರನ ಶಿಷ್ಯ. ಎಂತೆಂಥ ಗೂಂಡಾಗಳನ್ನು ಸಾಕಿದ್ದಾರೋ ಗೊತ್ತಿಲ್ಲ. ಯಾರನ್ನಾದರೂ ಬಿಟ್ಟು ನನ್ನನ್ನು ಕೊಲೆ ಮಾಡಿಸಲು ಹೇಸುವುದಿಲ್ಲ. ಆದರೆ, ನಾನು ಒಬ್ಬನೇ ತಿರುಗಾಡುತ್ತೇನೆ. ನನ್ನ ಜೀವಕ್ಕೆ ಅಪಾಯವಿದೆ ಎಂದು ಕೇಂದ್ರ ಗೃಹ ಸಚಿವರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ವಿದೇಶದಿಂದಲೂ ನನಗೆ ಬೆದರಿಕೆ ಕರೆ ಮಾಡಿಸುತ್ತಿದ್ದಾರೆ. ನಾನು ಗಟ್ಟಿ ಮನುಷ್ಯನಾಗಿರುವುದಕ್ಕೆ ಬದುಕಿದ್ದೇನೆ. ಬೇರೆ ಯಾರೋ ಆಗಿದ್ದರೆ ಎದೆ ಒಡೆದುಕೊಂಡು ಸಾಯುತ್ತಿದ್ದರು ಎಂದು ಹೇಳಿದ್ದಾರೆ.