ಪಕ್ಷದ 13 ಶಾಸಕರು, ಮೂವರು ಸಂಸದರಿದ್ದರೂ ಭದ್ರಕೋಟೆ ಬೆಳಗಾವಿಯಲ್ಲಿ ಮುಖಭಂಗ ಅನುಭವಿಸಿದ ಬಿಜೆಪಿಗೆ ಈ ಸೋಲು ಅನಿರೀಕ್ಷಿತವಾಗಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಸಹೋದರ ಲಖನ್ ಅವರಿಗೆ ಎರಡನೇ ಅಭ್ಯರ್ಥಿಯಾಗಿ ಟಿಕೆಟ್ ನೀಡುವಂತೆ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಪಕ್ಷದ ನಾಯಕರಿಗೆ ಮನವಿ ಮಾಡಿದ್ದರೂ, ವರಿಷ್ಠರು ಒಬ್ಬರಿಗೆ ಮಾತ್ರ ಟಿಕೆಟ್ ನೀಡಿದ್ದರು.
ಪಕ್ಷೇತರರಾಗಿ ಕಣಕ್ಕಿಳಿದ ಲಖನ್ ಜಯಗಳಿಸಿದ್ದು, ಬಿಜೆಪಿ ನಾಯಕರಿಗೆ ಬೆಳಗಾವಿ ಸೋಲು ಅರಗಿಸಿಕೊಳ್ಳಲಾಗುತ್ತಿಲ್ಲ. ಭದ್ರ ಕೋಟೆಯಲ್ಲಿ ಸೋಲು ಕಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ತಮಗೆ ಸಚಿವ ಸ್ಥಾನ ನೀಡದಿರುವುದು, ಲಖನ್ ಗೆ ಬಿಜೆಪಿ ಟಿಕೆಟ್ ನೀಡದಿರುವುದರಿಂದ ರಮೇಶ್ ಮುನಿಸಿಕೊಂಡಿದ್ದಾರೆನ್ನಲಾಗಿದೆ. ಆದರೆ, ಈ ಸೋಲಿಗೆ ತಾವು ಕಾರಣರಲ್ಲವೆಂದು ರಮೇಶ ಜಾರಕಿಹೊಳಿ ಈಗಾಗಲೇ ಸ್ಪಷ್ಟಪಡಿಸಿದ್ದು, ಬಿಜೆಪಿ ಸೋಲಿನ ಹೊಣೆ ನನಗೆ ಕಟ್ಟುವ ಪ್ರಯತ್ನ ನಡೆದಿದೆ. ನಾನು ಪಕ್ಷಕ್ಕಾಗಿಯೇ ಕೆಲಸ ಮಾಡಿದ್ದೇನೆ. ಮತದಾನದ ಕೊನೆ ನಾಲ್ಕು ದಿನ ಬದಲಾವಣೆ ಆಗಿದೆ. ನಾನು ಬಿಜೆಪಿ ಶಾಸಕನಾಗಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದೇನೆ. ಎಲ್ಲವನ್ನೂ ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ಬಾಂಬ್ ಸಿಡಿಸಿದ್ದಾರೆ.
ಇನ್ನು ಬಿಜೆಪಿ ಶಾಸಕಾಂಗ ಸಭೆಗೆ ರಮೇಶ ಜಾರಕಿಹೊಳಿ ಗೈರು ಹಾಜರಾಗಿದ್ದಾರೆ. ಬೆಳಗಾವಿ ಕಾಕತಿಯ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆದಿದೆ. ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಗೈರು ಹಾಜರಾಗಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಅವರು ಪರಾಭವಗೊಂಡ ಹಿನ್ನೆಲೆಯಲ್ಲಿ ಅವರು ಸಭೆಗೆ ಗೈರು ಹಾಜರಾಗಿದ್ದಾರೆ. ರಮೇಶ್ ಜಾರಕಿಹೊಳಿ ಕೂಡ ಗೈರು ಹಾಜರಾಗಿದ್ದಾರೆ.
ಶಾಸಕಾಂಗ ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕರು ಕೂಡ ಬೆಳಗಾವಿ ಸೋಲಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಷ್ಟೊಂದು ಸಂಸದರು, ಶಾಸಕರು ಇದ್ದರೂ ಪಕ್ಷದ ಅಭ್ಯರ್ಥಿಗೆ ಸೋಲಾಗಿರುವುದರ ಬಗ್ಗೆ ಚರ್ಚೆ ನಡೆದಿದೆ. ಬೆಳಗಾವಿ ಪರಿಷತ್ ಚುನಾವಣೆ ಸೋಲಿನ ಆತ್ಮಾವಲೋಕನ ನಡೆಸಲಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ಬೆಳಗಾವಿ ಸೋಲಿನ ಬಗ್ಗೆ ಪ್ರಸ್ತಾಪಿಸಿ, ಈಗಾಗಲೇ ಸಿಎಂ ಜೊತೆ ಚರ್ಚಿಸಿದ್ದು, ಆಂತರಿಕ ತನಿಖೆ ನಡೆಸಿ ಯಾರು ವಾಸ್ತವಿಕ ಸಹಕಾರ ಕೊಡಲಿಲ್ಲ ಎಂಬುದನ್ನು ತಿಳಿದು ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಬೆಳಗಾವಿಯಲ್ಲಿ ಓವರ್ ಕಾನ್ಫಿಡೆನ್ಸ್ ಹಿನ್ನಡೆಗೆ ಕಾರಣವಾಗಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ. ಸೋಲಿನ ಬಗ್ಗೆ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಾಳ್, ನಮ್ಮನ್ನೆಲ್ಲ ನೆಗ್ಲೆಟ್ ಮಾಡಿದ್ದಕ್ಕೆ ಹೀಗಾಗಿದೆ. ನವಗ್ರಹಗಳು ಇರುತ್ತವೆ, ಶಾಂತಿ ಮಾಡಬೇಕು ಎಂದು ಹೇಳಿದ್ದಾರೆ.
ಸೋದರನನ್ನು ಗೆಲ್ಲಿಸಿದ ರಮೇಶ್ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿಲ್ಲ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬಂದಿದ್ದರೂ, ರಮೇಶ್ ವಿರುದ್ಧ ಕ್ರಮಕೈಗೊಳ್ಳುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಭದ್ರ ಕೋಟೆಯಲ್ಲಿ ದೊಡ್ಡ ಮುಖಭಂಗವಾಗಿದ್ದರೂ, ಮುಜುಗರ ಎದುರಾಗಿದ್ದರೂ, ಬಿಜೆಪಿ ಕ್ರಮಕೈಗೊಳ್ಳುವ ಸ್ಥಿತಿಯಲ್ಲಿಲ್ಲ. ಮೇಲ್ಮನೆಯಲ್ಲಿ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಇರುವ ಬಿಜೆಪಿಗೆ ಲಖನ್ ಬೆಂಬಲ ಬೇಕಾಗುತ್ತದೆ. ರಮೇಶ್ ವಿರುದ್ಧ ಕ್ರಮ ಕೈಗೊಂಡರೆ ಬೆಳಗಾವಿಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ. ಹೀಗಾಗಿ ರಮೇಶ್ ವಿರುದ್ಧ ಕ್ರಮ ಕೈಗೊಳ್ಳದ ಸ್ಥಿತಿಯಲ್ಲಿಲ್ಲದ ಬಿಜೆಪಿಗೆ ಬೆಳಗಾವಿಯ ಸೋಲು ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.