ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿದ್ದ ಬ್ಯಾಂಕ್ ವಂಚನೆ ಕೇಸ್ ರದ್ದುಗೊಳಿಸುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ತನಿಖೆಗೆ ಸಹಕರಿಸುವಂತೆ ಸೂಚಿಸಿದೆ.
ಸಹಕಾರಿ ಅಪೆಕ್ಸ್ ಬ್ಯಾಂಕ್ ಗೆ ಸಾಲ ಮರುಪಾವತಿ ಮಾಡದೇ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಕೋರಿ ರಮೇಶ್ ಜಾರಕಿಹೊಳಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸಿಐಡಿ ತನಿಖೆಗೆ ಸಹಕರಿಸುವಂತೆ ಸೂಚಿಸಿದೆ.
ಇದೇ ವೇಳೆ ಸರ್ಕಾರದ ಪರ ವಕೀಲರು, ಸಿಐಡಿ ನೋಟೀಸ್ ನೀಡಿದರೂ ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗಿಲ್ಲ ಎಂದು ಹೈಕೋರ್ಟ್ ಗೆ ತಿಳಿಸಿದರು. ಈ ವೇಳೆ ನ್ಯಾಯಾಲಯ ತನಿಖೆಗೆ ಸಹಕರಿಸಬೇಕು. ವಿಚಾರಣೆಗೆ ಹಾಜರಾದರೆ ರಮೇಶ್ ಜಾರಕಿಹೊಳಿಯನ್ನು ಬಂಧಿಸದಂತೆ ಸಿಐಡಿಗೆ ಸೂಚಿಸಿದೆ.
ತಮ್ಮದೇ ಒಡೆತನದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಲಿಮಿಟೆಡ್ ಗಾಗಿ ರಮೇಶ್ ಜಾರಕಿಹೊಳಿ ಸಹಕಾರಿ ಅಫೆಕ್ಸ್ ಬ್ಯಾಂಕ್ ನಲ್ಲಿ 232 ಕೋಟಿ 88 ಲಕ್ಷ ರೂ. ಸಾಲಪಡೆದಿದ್ದರು. ಆದರೆ ಸಾಲ ಮರುಪಾವತಿಸದ ಹಿನೆಲೆಯಲ್ಲಿ ಬ್ಯಾಂಕ್ ವಂಚನೆ ಪ್ರಕರಣ ದಾಖಲಿಸಿತ್ತು. ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವರ್ಗಾವಣೆ ಮಾಡಿತ್ತು.