ಮನೆಯಲ್ಲಿ ಕೂರದೇ ರಮೇಶ ಜಾರಕಿಹೊಳಿ ಹೊರ ಬರಬೇಕು. ಮಾಧ್ಯಮದವರ ಎದುರು ಬಂದು ಹೇಳಿಕೆ ನೀಡಬೇಕು ಎಂದು ವಿನಂತಿ ಮಾಡುತ್ತೇನೆ. ರಮೇಶ್ ಜಾರಕಿಹೊಳಿ ದೂರು ನೀಡದಿದ್ದರೆ ನಾವೇ ದೂರು ನೀಡುತ್ತೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ನಾಳೆಯಿಂದ ಇದು ಯಾವ ಟರ್ನ್ ಪಡೆಯುತ್ತದೆಯೋ ಗೊತ್ತಿಲ್ಲ. ಫೇಕ್ ವಿಡಿಯೋ ಇದೆ. ಲ್ಯಾಬ್ ಟೆಸ್ಟ್ ನಡೆದರೆ ಅದರ ಸತ್ಯಾಸತ್ಯತೆ ಹೊರ ಬರಲಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ತನಿಖೆಗೆ ರಮೇಶ್ ಜಾರಕಿಹೊಳಿ ದೂರು ನೀಡಬೇಕು. ಅವರು ಮನೆಯಲ್ಲಿ ಕೂರದೆ ಹೊರಗೆ ಬರಬೇಕು. ಈ ವಿಚಾರದಲ್ಲಿ ದಿನೇಶ್ ಕಲ್ಲಹಳ್ಳಿಯನ್ನು ಕೂಡ ದಾರಿ ತಪ್ಪಿಸಿರಬಹುದು. ಯುವತಿಗೆ ದುಬೈನಲ್ಲಿ ಕೆಲಸ ಹಾಗೂ 50 ಲಕ್ಷ ರೂಪಾಯಿ ಕೊಡುವುದಾಗಿ ಆಮಿಷವೊಡ್ಡಲಾಗಿದೆ ಎನ್ನಲಾಗ್ತಿದೆ. ಇದರ ಹಿಂದೆ ದೊಡ್ಡ ತಂಡವೇ ಕೆಲಸ ಮಾಡಿದೆ. ಭಾರಿ ಮೊತ್ತದ ಹಣ ಖರ್ಚು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸಿಡಿಯನ್ನು ಲ್ಯಾಬ್ ಗೆ ಕಳುಹಿಸಿ ಟೆಸ್ಟ್ ಮಾಡಿಸಬೇಕು. ಗೃಹಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡುತ್ತೇನೆ. ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ತನಿಖೆ ಆಗಲೇಬೇಕು. ಅದು ನಕಲಿ ಸಿಡಿ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಆದ್ದರಿಂದ ಸಿಡಿ ಬಗ್ಗೆ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.