ಗೋಕಾಕ್: ವಾಲ್ಮೀಕಿ ನಿಗಮದಲ್ಲಿ ಹಗರಣ, ಮುಡಾ ಅಕ್ರಮ ಪ್ರಕರಣ ಖಂಡಿಸಿ ಈಗಾಗಲೇ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದೇವೆ. ಮುಂಬರುವ ದಿನಗಳಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿ ಶಾಸಕ ಯತ್ನಾಳ್ ಜೊತೆ ಸೇರಿ ಪಾದಯಾತ್ರೆ ಮಾಡುವುದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಗೋಕಾಕ್ ನಲ್ಲಿ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ಇಡೀ ರಾಜ್ಯದಲ್ಲಿಯೇ ನಡೆದ ಅತಿದೊಡ್ಡ ಹಗರಣವಾಗಿದೆ. ದಲಿತರ ಹಣವನ್ನು ನುಂಗಿ ನೀರು ಕುಡಿಯಲಾಗಿದೆ. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿ ಅನುಮತಿ ಪಡೆದು ಯತ್ನಾಳ್ ಹಾಗೂ ಇನ್ನು ಕೆಲ ನಾಯಕರೊಂದಿಗೆ ಸೇರಿ ಪಾದಯಾತ್ರೆ ಮಾಡುತ್ತೇವೆ ಎಂದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರಮೇಶ್ ಜಾರಕಿಹೊಳಿ, ನಾನು ಅವರೊಂದಿಗೆ ಮಾತನಾಡಲ್ಲ. ವಿಜೇಂದ್ರ ಅವರನ್ನು ರಾಜ್ಯಾಧ್ಯಕ್ಷ ಎಂದು ಒಪ್ಪಿಕೊಂಡಿಲ್ಲ. ನಾನು ನೇರವಾಗಿ ಹೈಕಮಾಂಡ್ ಜೊತೆ ಮಾತನಾಡುತ್ತೇನೆ. ಬೇರೆ ಯಾರ ಬಳಿಯೂ ಮಾತನಾಡುವುದಿಲ್ಲ ಎಂದು ಹೇಳಿದರು.