ನವದೆಹಲಿ: 10 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ರಮೇಶ್ ಬೈಸ್, ಜಾರ್ಖಂಡ್ ರಾಜ್ಯಪಾಲರಾಗಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ನೇಮಕ ಮಾಡಲಾಗಿದೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದು, ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ರಮೇಶ್ ಬೈಸ್ ಸೇರಿದಂತೆ 10 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ.
ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿ ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್, ಸಿಕ್ಕಿಂ ರಾಜ್ಯಪಾಲರಾಗಿ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಜಾರ್ಖಂಡ್ ರಾಜ್ಯಪಾಲರಾಗಿ ಸಿ.ಪಿ. ರಾಧಾಕೃಷ್ಣನ್, ಅಸ್ಸಾಂ ರಾಜ್ಯಪಾಲರಾಗಿ ಗುಲಾಬ್ ಚಂದ್ ಕಟಾರಿಯಾ ಮತ್ತು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಶಿವ ಪ್ರತಾಪ್ ಶುಕ್ಲಾ ನೇಮಕಗೊಂಡಿದ್ದಾರೆ.
ಮಣಿಪುರದ ಗವರ್ನರ್ ಲಾ ಗಣೇಶನ್ ಅವರನ್ನು ನಾಗಾಲ್ಯಾಂಡ್ ಗವರ್ನರ್ ಆಗಿ ನೇಮಿಸಲಾಗಿದೆ. ಬಿಹಾರದ ಗವರ್ನರ್ ಫಾಗು ಚೌಹಾಣ್ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಬಿಹಾರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ನ್ಯಾಯಮೂರ್ತಿ(ನಿವೃತ್ತ) ಎಸ್. ಅಬ್ದುಲ್ ನಜೀರ್ ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಆಂಧ್ರಪ್ರದೇಶದ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಛತ್ತೀಸ್‌ಗಢದ ರಾಜ್ಯಪಾಲರಾದ ಅನುಸೂಯಾ ಉಯಿಕ್ಯೆ ಅವರನ್ನು ಮಣಿಪುರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.