ಜೂನ್ 16 ರಂದು ಬಿಡುಗಡೆಯಾದ ʼಆದಿಪುರುಷ್ʼ ಚಿತ್ರ ಸಾಕಷ್ಟು ಟೀಕೆ ಮತ್ತು ನಕಾರಾತ್ಮಕ ವಿಮರ್ಶೆಗಳನ್ನು ಎದುರಿಸಿದ್ದು, ಕಳಪೆ ವಿಎಫ್‌ಎಕ್ಸ್ ನಿಂದ ಹಿಡಿದು ಸಂಭಾಷಣೆವವರೆಗೆ ಚಿತ್ರವು ಸಿನಿಪ್ರೇಮಿಗಳ ನಿರೀಕ್ಷೆಯನ್ನು ಪೂರೈಸಲಿಲ್ಲ.
ಇದರ ಮಧ್ಯೆ ರಮಾನಂದ್ ಸಾಗರ್ ಅವರ ಜನಪ್ರಿಯ ಧಾರಾವಾಹಿ ರಾಮಾಯಣ ಶೀಘ್ರದಲ್ಲೇ ದೂರದರ್ಶನದಲ್ಲಿ ಮರುಪ್ರಸಾರವಾಗಲಿದೆ ಎಂದು ಘೋಷಿಸಲಾಗಿದೆ. ಜುಲೈ 3 ರಿಂದ ಪೌರಾಣಿಕ ಧಾರಾವಾಹಿ ರಾಮಾಯಣ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ ಎಂದು ಶೆಮರೂ ಟಿವಿ ಘೋಷಿಸಿದೆ.
ರಾಮಾಯಣ ಧಾರಾವಾಹಿಯಲ್ಲಿ ಅರುಣ್ ಗೋವಿಲ್ ರಾಮನಾಗಿ ಮತ್ತು ದೀಪಿಕಾ ಚಿಖ್ಲಿಯಾ ಸೀತೆಯ ಪಾತ್ರವನ್ನು ನಿರ್ವಹಿಸಿದರೆ, ಸುನಿಲ್ ಲಾಹಿರಿ ಲಕ್ಷ್ಮಣನಾಗಿ ನಟಿಸಿದ್ದಾರೆ. ಟಿವಿ ಕಾರ್ಯಕ್ರಮದ ವೀಡಿಯೊವನ್ನು ಹಂಚಿಕೊಂಡ ಶೆಮರೂ ಟಿವಿಯ ಇನ್‌ಸ್ಟಾಗ್ರಾಮ್ ಖಾತೆ “ವಿಶ್ವ ಪ್ರಸಿದ್ಧ ಪೌರಾಣಿಕ ಧಾರಾವಾಹಿ ರಾಮಾಯಣವು ಎಲ್ಲಾ ಅಭಿಮಾನಿಗಳು ಮತ್ತು ನಮ್ಮ ಪ್ರೇಕ್ಷಕರಿಗೆ ಮರಳಿದೆ. ಜುಲೈ 3, 7.30 ರಿಂದ ನಿಮ್ಮ ನೆಚ್ಚಿನ ಚಾನಲ್ ಶೆಮರೂ ಟಿವಿಯಲ್ಲಿ ವೀಕ್ಷಿಸಿ” ಎಂದಿದೆ.
ಪ್ರಭಾಸ್, ಕೃತಿ ಸನನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಚಿತ್ರ ಬಿಡುಗಡೆಯಾದಾಗಿನಿಂದ ಸಾಕಷ್ಟು ಟೀಕೆಗೆ ಗುರಿಯಾಗಿದೆ. ರಾಮಾಯಣ ಧಾರವಾಹಿಯಲ್ಲಿ ಭಗವಾನ್ ರಾಮನ ಪಾತ್ರದಲ್ಲಿ ನಟಿಸಿದ ಅರುಣ್ ಗೋವಿಲ್, ಆದಿಪುರುಷ್ ನನ್ನು ‘ಹಾಲಿವುಡ್ ಕಿ ಕಾರ್ಟೂನ್’ ಎಂದು ಕರೆದಿದ್ದಾರೆ.
ಆದಿಪುರುಷ್ ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಪೌರಾಣಿಕ ಸಾಹಸ ಚಿತ್ರವಾಗಿದೆ. ಚಿತ್ರವನ್ನು ಓಂ ರಾವುತ್ ಬರೆದು ನಿರ್ದೇಶಿಸಿದ್ದಾರೆ .ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡ ಈ ಚಿತ್ರದಲ್ಲಿ ಪ್ರಭಾಸ್, ಸೈಫ್ ಅಲಿ ಖಾನ್, ಕೃತಿ ಸನೋನ್, ಸನ್ನಿ ಸಿಂಗ್ ಮತ್ತು ದೇವದತ್ತ ನಾಗೆ ನಟಿಸಿದ್ದಾರೆ. ಈ ಚಲನಚಿತ್ರವನ್ನು 500 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಯಿತು, ಇದು ಅತ್ಯಂತ ದುಬಾರಿ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.