ಬೆಂಗಳೂರು: ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಕಾಂಗ್ರೆಸ್ ನ 12 ಶಾಸಕರು ಸಮ್ಮತಿ ಸೂಚಿಸಿ ಸಹಿ ಹಾಕಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರ ಹೆಸರು ಬದಲಾವಣೆ ವಿಚಾರವಾಗಿ ಇಂದು ರಾಮನಗರ ಕಾಂಗ್ರೆಸ್ ನಾಯಕರ ನಿಯೋಗ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು. ರಾಮನಗರ ಹಾಗೂ ಮೆಡಿಕಲ್ ಕಾಲೇಜಿನ ಹೆಸರು ಬದಲಾವಣೆ ಮಾಡುವಂತೆ ಕೋರಿದೆ. ‘ರಾಮನಗರ’ವನ್ನು ‘ಬೆಂಗಳೂರು ದಕ್ಷಿಣ’ ಜಿಲ್ಲೆಯನ್ನಾಗಿ ಹೆಸರು ಬದಲಿಸುವಂತೆ ಮನವಿ ಮಾಡಲಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಮನಗರವನ್ನು ‘ಬೆಂಗಳೂರು ದಕ್ಷಿಣ’ ಎಂದು ಹೆಸರಿಡಲು ಆಗ್ರಹಿಸಲಾಗಿದೆ. ಈ ಮನವಿಗೆ ಸಿಎಂ ಸಿದ್ದರಾಮಯ್ಯ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಮೊದಲು ಬೆಂಗಳೂರು ಜಿಲ್ಲೆಗೆ ರಾಮನಗರ ಸಹ ಸೇರಿತ್ತು. ನಂತರ ರಾಮನಗರವನ್ನು ಪ್ರತ್ಯೇಕ ಜಿಲ್ಲೆ ಮಡಲಾಯಿತು. ಈಗ ರಾಮನಗರ ಹೆಸರು ಬದಲಿಸಲು ಮನವಿ ಮಾಡಲಾಗಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆ ಆಗಲಿದೆ ಎಂದರು.
ರಾಮನಗರವೇ ಕೇಂದ್ರ ಕಚೇರಿ ಆಗಿರಲಿದೆ. ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲೂಕುಗಳು ಬೆಂಗಳೂರು ದಕ್ಷಿಣಕ್ಕೆ ಸೇರಲಿವೆ. ರಾಮನಗರ ಬದಲು ಬೆಂಗಳೂರು ದಕ್ಷಿಣ ಎಂದು ಹೆಸರಿಡಲು ಹೇಳಲಾಗಿದೆ ಎಂದು ತಿಳಿಸಿದರು.