
ರಾಮನಗರ: ರಾಮನಗರದಲ್ಲಿ ವಕೀಲರ ಪ್ರತಿಭಟನೆ ತೀವ್ರಗೊಂಡಿದ್ದು, ಜಿಲ್ಲಾಧಿಕಾರಿ, ಎಸ್ ಪಿ ಹಗೂ ಪಿಎಸ್ ಐ ಮೂವರನ್ನೂ ವರ್ಗಾವಣೆ ಮಾಡುವಂತೆ ವಕೀಲರು ಪಟ್ಟು ಹಿಡಿದಿದ್ದಾರೆ.
40 ವಕೀಲರ ವಿರುದ್ಧ ದೂರು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ಸಿಡಿದೆದ್ದಿರುವ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮುಂದುವರೆಸಿದ್ದಾರೆ. ಕಳೆದ ಒಂದು ವಾರದಿಂದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಪಿಎಸ್ ಐ ತನ್ವೀರ್ ಅಮಾನತಿಗೆ ಆಗ್ರಹಿಸಿದ್ದಾರೆ.
ವಕೀಲರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸಾಮಾಜಿಕ ಕಾರ್ಯಕರ್ತ ಗೋವಿಂದರಾಜು, ರಾಮನಗರ ಜಿಲ್ಲಾಧಿಕಾರಿ, ಎಸ್ ಪಿ, ಪಿಎಸ್ಐ ಮೂವರನ್ನು ವರ್ಗಾವಣೆ ಮಾಡುವಂತೆ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ.
ರಾಮನಗರದಲ್ಲಿ ಅಶಾಂತಿ, ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಕೂಡಲೇ ಜಿಲ್ಲೆಯಿಂದ ಮೂವರನ್ನೂ ವರ್ಗಾವಣೆ ಮಾಡುವಂತೆ ಮನವಿ ಮಡಿದ್ದಾರೆ. ಮಾತುಕತೆಯಲ್ಲಿ ಬಗೆಹರಿಸಬಹುದಾದ ವಿಷಯವನ್ನು ಅನಗತ್ಯವಾಗಿ ದೊಡ್ಡದು ಮಾಡಿದ್ದು, ಸರಿಯಾಗಿ ತನಿಖೆ ಮಾಡದೇ ಎಫ್ ಐ ಆರ್ ಹಾಕಿ ದೋಂಬಿ ಎಬ್ಬಿಸಿದ್ದಾರೆ. ಇದೆಲ್ಲದಕ್ಕೂ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.