ರಾಮನಗರ: ರಾಮನಗರ, ಚನ್ನಪಟ್ಟಣ, ಮಂಡ್ಯದಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ರಾಮನಗರದಲ್ಲಿ ಕೆರೆ ಕೋಡಿ ಒಡೆದು ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿದೆ. ನಾಲ್ಕರಿಂದ ಐದು ಬಡಾವಣೆಯ 2,000ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ದಿನನಿತ್ಯದ ಬದುಕಿಗೆ ಬೇಕಾದ ದಿನಸಿ ಪದಾರ್ಥಗಳನ್ನು ಉಚಿತವಾಗಿ ನೀಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಮಳೆಯಿಂದ ಇಬ್ಬರು ಮೃತಪಟ್ಟಿದ್ದಾರೆ. ಮಳೆಯಿಂದ 459 ಕುರಿ ಹಾಗೂ ಮೇಕೆ, 16 ಹಸು ಮೃತಪಟ್ಟಿವೆ. 5000 ಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿವೆ. 600 ಎಕರೆ ಕೃಷಿ ಬೆಳೆ, 500 ಎಕರೆ ತೋಟಗಾರಿಕೆ ಬೆಳೆ ನಾಶವಾಗಿದೆ. 153 ಮನೆಗಳಿಗೆ ಹಾನಿಯಾಗಿದ್ದು, 3830 ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ ಎಂದರು.
ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. ರಾಮನಗರ, ಮಂಡ್ಯ, ಮೈಸೂರು ಪೊಲೀಸ್ ಅಧೀಕ್ಷಕರಿಗೆ ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಲಾಗಿದೆ ಎಂದರು.