ಬೆಂಗಳೂರು: ರಾಜ್ಯದ ಎ ಮತ್ತು ಬಿ ದರ್ಜೆ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಶೌಚಾಲಯ, ಲೈಟ್ ಸೇರಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಅವರ ಗಮನ ಸೆಳೆಯುವ ಸೂಚನೆಗೆ ಸಚಿವರು ಉತ್ತರ ನೀಡಿ, ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ಸರ್ಕಾರಕ್ಕೆ ಜಮೆ ಮಾಡುವುದಿಲ್ಲ. ಆಯಾ ದೇವಾಲಯಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಕುರಿತಾಗಿ ತಪ್ಪು ಅಭಿಪ್ರಾಯಗಳು ಬೇಡ ಎಂದು ತಿಳಿಸಿದ್ದಾರೆ.
65 ವರ್ಷ ಮೇಲ್ಪಟ್ಟವರು, ಒಂದು ವರ್ಷದೊಳಗಿನ ಚಿಕ್ಕ ಮಕ್ಕಳಿರುವ ತಾಯಂದಿರಿಗೆ ದೇವಾಲಯಗಳಲ್ಲಿ ನೇರ ದರ್ಶನಕ್ಕೆ ಸೌಲಭ್ಯ ಕಲ್ಪಿಸಲಾಗಿದೆ. ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ನಿರ್ಮಾಣಕ್ಕೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಅರ್ಚಕರಿಗೆ ತಸ್ತಿಕ್ ಹಣವನ್ನು ಅವರ ಖಾತೆಗೆ ಜಮಾ ಮಾಡುತ್ತಿದ್ದು, ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಸಿ ವರ್ಗದ ಅರ್ಚಕರು ಮತ್ತು ನೌಕರರು, ಅವರ ಕುಟುಂಬದ ಒಬ್ಬರು ಸದಸ್ಯರಿಗೆ ಭಾರತ್ ಗೌರವ್ ಕಾಶಿ ಯಾತ್ರೆ, ದಕ್ಷಿಣ ಭಾರತ ಯಾತ್ರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.