ರಾಮನಗರ: ಭಾಷೆ, ನೆಲ, ಜಲದ ವಿಚಾರದಲ್ಲಿ ಅನ್ಯಾಯವಾದಾಗ ಪ್ರತಿಭಟನೆಗಳು ಸಹಜ. ಹೋರಾಟಗಾರರಿಗೆ ನಮ್ಮಿಂದ ಯಾವುದೇ ಧಕ್ಕೆಯುಂಟಾಗಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ದಿ ತಿಳಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಕಳೆದ ವರ್ಷ 660 ಟಿಎಂಸಿ ನೀರು ತಮಿಳುನಾಡಿಗೆ ಬಿಟ್ಟಿದ್ದೇವೆ. ರಾಜ್ಯದಲ್ಲಿ ಮಳೆ ಇಲ್ಲ, ಮಾನಿಟರಿ ವಿಂಗ್ ಗೆ ಎಲ್ಲವೂ ಗೊತ್ತಿದೆ. ಸುಪ್ರೀಂಕೋರ್ಟ್ ಗೂ ನೀರಿಲ್ಲದಿರುವ ಬಗ್ಗೆ ಮಾಹಿತಿ ಇದ್ದರೂ ಸ್ಟೇ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ಇದ್ದರೂ ಮಧ್ಯಪ್ರವೇಶ ಮಾಡುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರು ಮೋದಿಯವರಿಗೆ ಮನವರಿಕೆ ಮಾಡಬೇಕಿತ್ತು. ಆದರೆ ಬಿಜೆಪಿಯವರು ಆರೋಪ ಮಾಡುವುದರಲ್ಲಿಯೇ ತಲ್ಲೀನರಾಗಿದ್ದಾರೆ ಎಂದು ಗುಡುಗಿದರು.
ರಾಜ್ಯದಲ್ಲಿ ಮಳೆ ಬಾರದಿರುವುದಕ್ಕೂ ಸರ್ಕಾರಕ್ಕೂ ಸಂಬಂಧವಿದೆಯೆ? ಮಳೆ ಬಾರದಿರುವುದು ನೈಸರ್ಗಿಕ ವಿಕೋಪ. ಸರ್ಕಾರ ಕೂಡ ರಾಜ್ಯದ ಜನರ ಹಿತ ರಕ್ಷಣೆಗಾಗಿ ನಿಂತಿದೆ ಎಂದು ಹೇಳಿದರು.