ಬೆಂಗಳೂರು : ಕುಲವಂ ಪೇಳ್ವುದು ನಾಲ್ಗೆ ಎಂಬ ಮಾತಿನಂತೆ ನಿಮ್ಮ ಸಂಸ್ಕಾರ ಏನು ಎಂಬುದನ್ನು ನೀವಾಡಿರುವ ಮಾತು ಪ್ರತಿಬಿಂಬಿಸುತ್ತಿದೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಸಚಿವ ರಾಮಲಿಂಗ ರೆಡ್ಡಿ ಕಿಡಿಕಾರಿದ್ದಾರೆ.
ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ರಾಮಲಿಂಗ ರೆಡ್ಡಿ, ಇದೇ ಏನು ಬಿಜೆಪಿ, ಆರ್ ಎಸ್ ಎಸ್ ನಿಮ್ಮ ತಂದೆ-ತಾಯಿ ನಿಮಗೆ ಕಲಿಸಿರುವ ಸಂಸ್ಕೃತಿ. ಇದೇ ಏನು ನಿಮ್ಮ ಆಚಾರ-ವಿಚಾರ? ಎಂದು ಪ್ರಶ್ನಿಸಿದ್ದಾರೆ.
ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ’ ಎಂಬ ದಾಸರವಾಣಿಯನ್ನು ಪರಿಪಾಲಿಸಬೇಕಾದ ಸ್ಥಿತಿಗೆ ನೀವು ಬಂದು ನಿಂತಿರುವುದು ದುರಂತ. “ಮಾತು ಆಡಿದರೆ ಹೋಯಿತು,ಮುತ್ತು ಉದುರಿದರೆ ಹೋಯಿತು” ಎಂಬಂತೆ ನೀವು ಮುಖ್ಯಮಂತ್ರಿಗಳ ಬಗ್ಗೆ ಬಳಸಿರುವ ಪದ 6.50 ಕೋಟಿ ಕರ್ನಾಟಕದ ಜನತೆಯನ್ನು ಕುರಿತು ಆಡಿದ ಮಾತಾಗಿರುತ್ತದೆ. ಅವರಿಗೆ ಮಾಡಿದ ಅವಮಾನವಾಗಿತ್ತದೆ ಎಂದರು.
ನೀವು ಆಡಿರುವ ಮಾತು, ಬಳಸಿರುವ ಪದ ನಿಮ್ಮ ಮಾನಸಿಕ ಸ್ಥಿತಿಯ ಪ್ರತೀಕ. ಸಣ್ಣ ಮಾತು ಆಡುವುದರಿಂದ ನೀವು ದೊಡ್ಡವರಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸಚಿವರಾಗಿದ್ದಾಗ ಸಂವಿಧಾನ ಬದಲಿಸುತ್ತೇವೆ, ಅದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿದ್ದೀರಿ. ಈಗ ಇಂತಹ ಮಾತು. ನಿಮಗಿದು ಮರ್ಯಾದೆ ತರುವುದಿಲ್ಲ. ಬಿಜೆಪಿ ಪಕ್ಷಕ್ಕೆ ಕಿಂಚಿತ್ತಾದರೂ ಮಾನ-ಮರ್ಯಾದೆ, ಆಚಾರ ವಿಚಾರ ಇದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ನೀವು ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಇಷ್ಟು ದಿನ ಅಡ್ರೆಸ್ ಇಲ್ಲದಂತೆ ಕಳೆದು ಹೋಗಿದ್ದ ತಾವು ಈಗ ಚುನಾವಣೆ ಸಮಯದಲ್ಲಿ ಮತ ಗಳಿಸಲು ರೋಷ, ಆವೇಶದ ಮಾತುಗಳನ್ನು ಆಡುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳದೆ ಇರುವಷ್ಟು ಜನ ದಡ್ಡರಲ್ಲ ಎಂದಿದ್ದಾರೆ.