ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಾಮಾನ್ಯ ಬಸ್ ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಯೋಜನೆ ದುರ್ಬಳಕೆಯಾಗುತ್ತಿದೆ ಎಂದು ಹೇಳಲಾಗಿದೆ.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರತಿದಿನ ಶೇಕಡ 1ರಷ್ಟು ಶಕ್ತಿ ಯೋಜನೆ ದುರ್ಬಳಕೆ ಆಗುತ್ತಿದೆ. ಪ್ರತಿದಿನ 1.39 ಕೋಟಿ ಪ್ರಯಾಣಿಕರು ಓಡಾಡುತ್ತಿದ್ದಾರೆ. ಇದರಲ್ಲಿ 1 ರಷ್ಟು ದುರ್ಬಳಕೆ ಆಗುತ್ತಿದೆ ಎಂದು ಹೇಳಿದ್ದಾರೆ.
ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಯೋಜನೆ ಜಾರಿಗೆ ಮೊದಲು 84.91 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಈಗ 109.95 ಲಕ್ಷಕ್ಕೆ ಏರಿಕೆಯಾಗಿದೆ. 749.30 ಕೋಟಿ ರೂ. ಮೌಲ್ಯದ ಟಿಕೆಟ್ ನೀಡಲಾಗಿದೆ. ಪ್ರತಿದಿನ 59.55 ಲಕ್ಷ ಮಹಿಳಾ ಪ್ರಯಾಣಿಕರು ಓಡಾಡಿದ್ದಾರೆ. ಇದೇ ರೀತಿ ಮುಂದುವರೆದರೆ ವರ್ಷಾಂತ್ಯಕ್ಕೆ ಸಾರಿಗೆ ನಿಗಮದ ಸಾಲ ತೀರಲಿದೆ. ಸಾರಿಗೆ ನಿಗಮಗಳಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.
ಕೇಳಿದ ಕೂಡಲೇ ಹಣಕಾಸು ಇಲಾಖೆ ಹಣ ನೀಡುವುದಿಲ್ಲ, ಕ್ಲಾರಿಫಿಕೇಶನ್ ಕೇಳುತ್ತಾರೆ ಎಂದು ತಿಳಿಸಿದ ಸಚಿವರು, ಪ್ರತಿ ತಿಂಗಳ 1ನೇ ತಾರೀಕು ಕೆಎಸ್ಆರ್ಟಿಸಿ ಸಿಬ್ಬಂದಿಗೆ ವೇತನ ನೀಡಲಾಗುತ್ತದೆ. 7ರಂದು ಬಿಎಂಟಿಸಿ, 17ರಂದು ವಾಯುವ್ಯಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಿಬ್ಬಂದಿಗೆ ವೇತನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.