ಮುಂಬೈ: ಬಕ್ರೀದ್ ಗೆ ಬಲಿ ಕೊಡಲು ಸಿದ್ಧವಾಗಿದ್ದ ಕುರಿ ಮೇಲೆ ‘ರಾಮ’ನ ಹೆಸರು ಬರೆದಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಮೂವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮುಸ್ಲೀಂರ ಪವಿತ್ರ ಹಬ್ಬ ಬಕ್ರೀದ್ ನ್ನು ಈವಾರ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ನಡುವೆ ನವಿ ಮುಂಬೈನ ಬೇಲಾಪುರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ನಲ್ಲಿ ಗುಡ್ ಲಕ್ ಕುರಿ ಮಾಂಸದಂಗಡಿಯಲ್ಲಿ ಬಿಳಿ ಕುರಿಯೊಂದರ ಮೇಲೆ ‘ರಾಮ’ ಎಂದು ಹಳದಿ ಬಣ್ಣದಲ್ಲಿ ಬರೆಯಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಷಯ ತಿಳಿಯುತ್ತಿದ್ದಂತೆ ಅಂಗಡಿಗೆ ಧಾವಿಸಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಅಂಗಡಿ ಮಾಲೀಕ ಮಹಮ್ಮದ್ ಶಫಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಮನ ಹೆಸರನ್ನು ಬರೆದು ಕುರಿಯನ್ನು ಬಲಿ ಕೊಡಲು ಸಿದ್ಧತೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂತಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ. ಅಂಗಡಿ ಮಾಲೀಕ ಹಾಗೂ ರಾಮನ ಹೆಸರು ಬರೆದು ಕುರಿ ಬಲಿಗೆ ಸಿದ್ಧತೆ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪರಿಸ್ಥಿತಿ ಗಂಭೀರತೆಯನ್ನು ಅರಿತ ಪೊಲೀಸರು, ಅಂಗಡಿ ಮಾಲೀಕ ಮೊಹಮ್ಮದ್ ಶಫಿ ಸೇರಿದಂತೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.