ಬೆಳಗಾವಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣದಿಂದ ಹಿಡಿದು, ರಾಮಲಲ್ಲಾ ಮೂರ್ತಿ ಕೆತ್ತನೆ, ಪ್ರತಿಷ್ಠಾಪನೆ ಮೂಹೂರ್ತ, ಪೂಜಾ ಕೈಂಕರ್ಯ ಸೇರಿದಂತೆ ರಾಮ ಮಂದಿರ ನಿರ್ಮಾಣದಲ್ಲಿ ಕನ್ನಡಿಗರದ್ದೇ ಪಾರುಪತ್ಯ.
ರಾಮಲಲ್ಲಾ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ್ದರೆ. ಮಂದಿರ ನಿರ್ಮಾಣದ ಕಾಂಟ್ರ್ಯಾಕ್ಟರ್ ಕೂಡ ಕನ್ನಡಿಗ ಮುನಿರಾಜು ಎಂಬುದು ತಿಳಿದುಬಂದಿದೆ. ಅಷ್ಟೇ ಅಲ್ಲ ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆಗೆ ಮುಹೂರ್ತ ನೀಡಿದ್ದು ಕೂಡ ಕರ್ನಾಟಕದವರು ಎಂಬುದು ಹೆಮ್ಮೆಯ ವಿಚಾರ.
ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದೆ. ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿ ವಿರಾಜಮಾನವಾಗಿದೆ ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ರಾಮ ಮಂದಿರ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕರ್ನಾಟಕದ ಅದರಲ್ಲಿಯೂ ಬೆಳಗಾವಿಯ ವಿದ್ವಾಂಸರೊಬ್ಬರು ಮುಹೂರ್ತ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅಯೋಧ್ಯೆ ರಾಮಮಂದಿರ ಭೂಮಿ ಪೂಜೆಗೆ ಬೆಳಗಾವಿಯ ವಿಜಯೇಂದ್ರ ಶರ್ಮಾ ಮುಹೂರ್ತ ನೀಡಿದ್ದರಂತೆ. 2020 ಆಗಸ್ಟ್ 15ರಂದು ಶಂಕು ಸ್ಥಾಪನೆಗೆ ವಿಜಯೇಂದ್ರ ಶರ್ಮಾ ಮುಹೂರ್ತ ನೀಡಿದ್ದಾಗಿ ತಿಳಿಸಿದ್ದಾರೆ. ಅಭಿಜಿತ್ ಮುಹೂರ್ತ, ಮೇಷ ಲಗ್ನದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುವಂತೆ ಮುಹೂರ್ತವಿಟ್ಟು ಕೊಟ್ಟಿದ್ದೆ. ಇದೇ ಮುಹೂರ್ತವನ್ನು ಟ್ರಸ್ಟಿಗಳು, ಪಂಡಿತರು ಸೇರಿ ಫೈನಲ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬೆಳಗಾವಿಯ ನವ ಬೃಂದಾವನ ನಿವಾಸಿಯಾಗಿರುವ ವಿಜಯೇಂದ್ರ ಶರ್ಮಾ ವಿದ್ಯಾವಿಹಾರ ವಿದ್ಯಾಲಯದ ಕುಲಪತಿಗಳಾಗಿದ್ದಾರೆ. ಒಟ್ಟಾರೆ ರಾಮ ಮಂದಿರ ಶಂಕುಸ್ಥಾಪನೆ, ಮಂದಿರ ನಿರ್ಮಾಣ, ರಾಮಲಲ್ಲಾ ಮೂರ್ತಿ ಕೆತ್ತನೆ, ಪ್ರಾಣಪ್ರತಿಷ್ಠಾಪನೆ, ಹೋಮ-ಹವನ, ಪೂಜಾ ಕೈಂಕರ್ಯದವರೆಗೂ ಅಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿ ಕನ್ನಡಿಗರದ್ದೇ ಹೆಚ್ಚಿನ ಪಾರುಪತ್ಯವಿರುವುದು ನಿಜಕ್ಕೂ ಹೆಮ್ಮೆಯ ವಿಷಯ.