ಮಂಗಳೂರು: ಅಯೋಧ್ಯೆಯಲ್ಲಿ ನಾಳೆ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗಿದೆ.
ರಾಜ್ಯದಲ್ಲಿಯೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ ಮೇರೆಗೆ ಪೊಲೀಸರು ಕಟ್ಟೆಚ್ಚರ ಕೈಗೊಂಡಿದ್ದಾರೆ. ಪ್ರಮುಖವಾಗಿ ದಕ್ಷಿಣ ಕನ್ನಡ, ಮಂಗಳೂರಿನಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದು, ಸಾವಿರಾರು ಪೊಲೀಸರು ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ.
ಇಂದು ಮಧ್ಯರಾತ್ರಿಯಿಂದ ಮಂಗಳೂರಿನಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಫ್ಲೆಕ್ಸ್, ಬಂಟಿಂಗ್ಸ್ ಗಳ ಮೇಲೆ ನಿಗಾವಹಿಸಲಾಗಿದೆ. 196 ಧಾರ್ಮಿಕ ಕಾರ್ಯಕ್ರಮ ಸ್ಥಳ ಗುರುತಿಸಲಾಗಿದ್ದು, 131 ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ.
57 ಸೆಕ್ಟರ್ ಮೊಬೈಲ್ ಸ್ಕ್ವಾಡ್ ಹಗಲು-ರಾತ್ರಿ ಗಸ್ತು ಕಾರ್ಯ ಕೈಗೊಳ್ಳಲಿದೆ. 14 ಚೆಕ್ ಪಾಯಿಂಟ್ ನಿಯೋಜಿಸಲಾಗಿದೆ. 9 ಸಿಎ ಆರ್, 3 ಕೆ ಎಸಾರ‍್ ಪಿ ತುಕಡಿ ನಿಯೋಜನೆ, ಮೆರವಣಿಗೆ ರ್ಯಾಲಿಗಳಿಗೆ ಯಾವುದೇ ಅವಕಾಶವಿಲ್ಲ. 3 ಡಿಸಿಪಿ, 6 ಎಸಿಪಿ, 11 ಪಿಐ, 37 ಪಿಎಸ್ ಐ ಹಾಗೂ 781 ಪೊಲೀಸರನ್ನು ನಿಯೋಜಿಸಲಾಗಿದೆ.