ಅಯೋಧ್ಯೆ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದ್ದು, ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ಕುಟುಂಬ ಸಮೇತರಾಗಿ ಅಯೋಧ್ಯೆ ರಾಮ ಮಂದಿರಕ್ಕೆ ತೆರಳಿದ್ದು, ಸಂತಸ ಹಂಚಿಕೊಂಡಿದ್ದಾರೆ.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, || ಜೈ ಶ್ರೀರಾಮ್ || ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ ಎಂದು ತಿಳಿಸಿದ್ದಾರೆ.
ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ಇಂದು ನನಸಾಗಿದೆ. ಅಸಂಖ್ಯಾತ ಕರಸೇವಕರ ಹೋರಾಟ, ತ್ಯಾಗ-ಬಲಿದಾನದ ಫಲ ಸಾಕಾರವಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ನೆರವೇರುತ್ತಿದೆ. ಈ ಎಲ್ಲಾ ಕರಸೇವಕರ ಪರಿಶ್ರಮದ ಫಲದಿಂದ ಇಂತಹ ದಿವ್ಯಕ್ಷಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುವ ಪುಣ್ಯ ನನಗೆ ಧಕ್ಕಿದೆ ಮತ್ತು ಶ್ರೀರಾಮ ದೇವರಿಗೆ ಭಕ್ತಿ ಸಮರ್ಪಣೆ ಮಾಡುವ ಸುದೈವವೂ, ಅವಕಾಶವು ನನ್ನದಾಗಿದೆ ಎಂದಿದ್ದಾರೆ.
ಎಲ್ಲ ಕರಸೇವಕರನ್ನೂ ಸ್ಮರಿಸುತ್ತಾ, ಈ ಸುಸಂದರ್ಭದಲ್ಲಿ ಸಮಸ್ತ ರಾಮಭಕ್ತರಿಗೆ ಶುಭಾಶಯಗಳನ್ನು ಕೋರುತ್ತೇನೆ. ಪ್ರತಿಯೊಬ್ಬರಿಗೂ ಆ ರಾಮದೇವರು ಸುಖ-ಶಾಂತಿ, ನೆಮ್ಮದಿ-ಸಮೃದ್ಧಿಯನ್ನು ಕರುಣಿಸಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.