ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದೆ. ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಇಂದಿನಿಂದಲೇ ಅಯೋಧ್ಯೆಯಲ್ಲಿ ಪೂಜಾ ವಿಧಿವಿಧಾನಗಳು ಆರಂಭವಾಗಿವೆ.
ರಾಮ ಮಂದಿರದಲ್ಲಿ ರಾಮಲಲ್ಲಾ ಹೊಸ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಬಳಿಕ ಹಳೆಯ ರಾಮಲ್ಲಾ ಮೂರ್ತಿಯನ್ನು ಏನು ಮಾಡುತ್ತಾರೆ? ಜನವರಿ 22ರ ಬಳಿಕ ರಾಮ ಮಂದಿರಕ್ಕೆ ಜನರು ಯಾವಾಗ ತೆರಳಬಹುದು? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವವಾಗುವುದು ಸಹಜ. ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಜನವರಿ 22ರಂದು ರಾಮ ಮಂದಿರ ಉದ್ಘಾಟನೆ, ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾನೆ ಕಾರ್ಯಕ್ರಮದ ಬಳಿಕ ಜನವರಿ 23ರಿಂದ ರಾಮ ಮಂದಿರಕ್ಕೆ ಭೇಟಿ ನೀಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಜನವರಿ 23ರಿಂದ ಅಯೋಧ್ಯೆಯಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ, ವಿಐಪಿ, ವಿವಿಐಪಿಗಳಿಗಾಗಿ ಅವಕಾಶ ನೀಡಲಾಗುತ್ತಿದ್ದು, ಹೆಚ್ಚು ಸಾಲುಗಳನ್ನು ರಚಿಸಲಾಗುತ್ತಿದೆ. ಭಕ್ತರಿಗಾಗಿ ದೇವಾಲಯ 12-14 ಗಂಟೆಗಳ ಕಾಲ ತೆರೆದಿರಲಿದೆ.
ರಾಮಲಲ್ಲಾ ಹೊಸ ಮೂರ್ತಿ ಪ್ರತಿಷ್ಠಾಪನೆ ಬಳಿಕ ಎಲ್ಲಾ ಹಳೆಯ ವಿಗ್ರಹಗಳನ್ನೂ ದೇವಾಲಯದಲ್ಲಿಯೇ ಪ್ರತಿಷ್ಠಾಪಿಸಲಾಗುತ್ತದೆ. ಜನವರಿ 21ರಂದು ಉತ್ಸವ ಮೂರ್ತಿಯನ್ನು ಗರ್ಭಗುಡಿಗೆ ತರಲಾಗುತ್ತದೆ. ಭಗವಾನ್ ರಾಮ ಸೂರ್ಯವಂಶದವರು. ಆದ್ದರಿಂದ ಸೂರ್ಯ ತಿಲಕ ಸಂಪ್ರದಾಯವಿದೆ. ಸೂರ್ಯನ ಕಿರಣಗಳು ರಾಮ ನವಮಿಯಂದು 12 ಗಂಟೆಗೆ ಬೀಳಲಿದೆ.
ಇನ್ನು ಸಾಮಾನ್ಯ ಜನರು ರಾಮಲಲ್ಲಾ ದರ್ಶನ ಪಡೆಯಲು ಬೆಳಿಗ್ಗೆ 7 ಗಂಟೆಯಿಂದ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 7ರಿಂದ ಮಧ್ಯಾಹ್ನ 11 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 7 ಗಂಟೆಯವರೆಗೆ ಅವಕಾಶವಿರಲಿದೆ. ಆರತಿ ಸಮಯ ಮಧ್ಯಾಹ್ನ 12 ಹಾಗೂ ಸಂಜೆ 7ಗಂಟೆಗೆ ಇರಲಿದೆ.