ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ಹೆಚ್ಚಿನ ದೇಣಿಗೆ ಸಂಗ್ರಹ ಮಾಡಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೇಂದ್ರ ಸಚಿವಾಲಯದಿಂದ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನೋಂದಣಿಗೆ ಅರ್ಜಿ ಸಲ್ಲಿಕೆ ಮಾಡಿದ್ದು ಶೀಘ್ರದಲ್ಲಿಯೇ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ವಿದೇಶಿ ದೇಣಿಗೆಯನ್ನು ಸ್ವೀಕರಿಸಲಿದೆ ಎಂದು ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿ ತಿಳಿಸಿದ್ದಾರೆ. ಶ್ರೀರಾಮ ದೇಗುಲದ ಟ್ರಸ್ಟ್ ಈ ವರ್ಷದ ಜೂನ್ ತಿಂಗಳಲ್ಲಿ FCRA ಅನುಮೋದನೆಗೆ ಅರ್ಜಿ ಸಲ್ಲಿಕೆ ಮಾಡಿತ್ತು.
ನಾವು ಎಫ್ಸಿಆರ್ಎ ಅನುಮತಿಯನ್ನು ಈ ಮೊದಲೆ ಪಡೆದುಕೊಳ್ಳಬಹುದಿತ್ತು. ಆದರೆ ನಾವು ಆ ರೀತಿ ಮಾಡಲಿಲ್ಲ. ಟ್ರಸ್ಟ್ಗೆ ಮೂರು ವರ್ಷ ತುಂಬಿದ ಬಳಿಕ ಟ್ರಸ್ಟ್ ಎಫ್ಸಿಆರ್ಎಗೆ ಅರ್ಜಿ ಸಲ್ಲಿಕೆ ಮಾಡಬಹುದು. ನಮ್ಮ ಟ್ರಸ್ಟ್ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಮೂರು ವರ್ಷಗಳನ್ನು ಪೂರೈಕೆ ಮಾಡಿದೆ ಎಂದು ಗಿರಿ ಪುಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ಟ್ರಸ್ಟ್ ಈವರೆಗೆ ದೇಶದ ನಾಗರಿಕರು ಹಾಗೂ ವಿವಿಧ ಸಂಸ್ಥೆಗಳಿಂದ 3200 ಕೋಟಿ ರೂಪಾಯಿಗಳನ್ನ ನಿರ್ಮಾಣ ಮಾಡಿದೆ. ಜನರು ದೇವಸ್ಥಾನ ನಿರ್ಮಾಣಕ್ಕೆ ಉದಾರ ಮನಸ್ಸಿನಿಂದ ಸಹಾಯ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಅಭಿವೃದ್ಧಿಗೆ ಭಕ್ತರು ನೀಡಿರುವ ಹಣವೇ ಸಾಲುತ್ತದೆ ಎಂದು ಗಿರಿ ಹೇಳಿದ್ದಾರೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆಗಳನ್ನು ಹೊಂದಿದೆ.
2024ರ ಜನವರಿ ತಿಂಗಳ ಮಕರಸಂಕ್ರಾತಿಯ ದಿನಂದು ದೇವಾಲಯದ ಗರ್ಭಗುಡಿಯು ಭಕ್ತರ ದರ್ಶನಕ್ಕೆ ಮುಕ್ತವಾಗುವ ಎಲ್ಲಾ ಸಾಧ್ಯತೆಗಳು ಇವೆ ಅಂತಾ ಗಿರಿ ಹೇಳಿದ್ದಾರೆ.