ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ನೀವು ನೀಡಿದ ದೇಣಿಗೆಯಿಂದ ಎರಡು ಲಾಭವಿದೆ. ಒಂದು ಪುಣ್ಯವಾದ್ರೆ ಇನ್ನೊಂದು ದೇಣಿಗೆ ಪಾವತಿ ನಂತ್ರ ತೆರಿಗೆಯಲ್ಲಿ ವಿನಾಯಿತಿ ಪಡೆಯಬಹುದು. ಅಯೋಧ್ಯೆ ರಾಮ ಮಂದಿರವನ್ನು ಕೇಂದ್ರ ಸರ್ಕಾರ 2020-21 ಆರ್ಥಿಕ ವರ್ಷದಿಂದ ಸೆಕ್ಷನ್ 80G(2)(b) ಅಡಿಯಲ್ಲಿ ಐತಿಹಾಸಿಕವಾಗಿ ಪ್ರಮುಖ ಮತ್ತು ಪ್ರಸಿದ್ಧ ಸಾರ್ವಜನಿಕ ಪೂಜಾ ಸ್ಥಳವೆಂದು ಗುರುತಿಸಿದೆ. ಹಾಗಾಗಿ ನೀವು ಇಲ್ಲಿಗೆ ನೀಡಿದ ದೇಣಿಗೆಯಿಂದ ತೆರಿಗೆ ವಿನಾಯಿತಿ ಪಡೆಯಬಹುದು.
ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80G ಅಡಿಯಲ್ಲಿ, ವ್ಯಕ್ತಿಗಳು, ಕಂಪನಿಗಳು ಮತ್ತು ಸಂಸ್ಥೆಗಳು ತೆರಿಗೆಯಲ್ಲಿ ವಿನಾಯಿತಿ ಪಡೆಯಬಹುದಾಗಿದೆ. ಆದ್ರೆ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳಿವೆ. ಅವುಗಳನ್ನು ನೀವು ಪಾಲಿಸಬೇಕು.
ರಾಮ ಮಂದಿರ ನವೀಕರಣ ಅಥವಾ ದುರಸ್ತಿಗಾಗಿ ನೀಡಿದ ದೇಣಿಗೆಯಲ್ಲಿ ಮಾತ್ರ ತೆರಿಗೆ ವಿನಾಯಿತಿ ಸಿಗುತ್ತದೆ. ಉಳಿದ ದೇಣಿಗೆಯನ್ನು ಪರಿಗಣಿಸಲಾಗುವುದಿಲ್ಲ. ನೀವು ಎರಡು ಸಾವಿರಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ನೀಡಿದ್ದರೆ ಅಥವಾ ವಸ್ತುಗಳ ರೂಪದಲ್ಲಿ ದಾನ ನೀಡಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ.
ನೀವು ದೇಣಿಗೆಯನ್ನು ಚೆಕ್ ಅಥವಾ ಆನ್ಲೈನ್ ಮೂಲಕ ಪಾವತಿಸಬಹುದು. ಅದಕ್ಕೆ ರಸೀದಿ ನೀಡಲಾಗುತ್ತದೆ. ಅದನ್ನು ನೀವು ಸುರಕ್ಷಿತವಾಗಿಟ್ಟುಕೊಳ್ಳಬೇಕು. ತೆರಿಗೆ ಪಾವತಿ ಸಮಯದಲ್ಲಿ ಅದನ್ನು ನೀಡಬೇಕು. ನೀವು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದರೆ ಐವತ್ತು ಸಾವಿರ ರೂಪಾಯಿ ತೆರಿಗೆ ವಿನಾಯಿತಿ ಪಡೆಯಬಹುದು. ನೀವು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕೃತ ವೆಬ್‌ಸೈಟ್ ಮೂಲಕವೇ ದೇಣಿಗೆ ನೀಡಿದ್ರೆ ಸುರಕ್ಷಿತ.