
ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜನವರಿ 22ರಂದು ನಡೆದ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ 113 ಕೋಟಿ ರೂ. ವೆಚ್ಚವಾಗಿದೆ ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಇದುವರೆಗೂ ಮಂದಿರ ನಿರ್ಮಾಣ ಕಾರ್ಯಕ್ಕೆ 1,800 ಕೋಟಿ ರೂ. ವೆಚ್ಚ ಮಾಡಲಾಗಿದೆ. ಉಳಿದ ಎರಡು ಹಂತದ ನಿರ್ಮಾಣ ಯೋಜನೆಗಾಗಿ 670 ಕೋಟಿ ರೂಪಾಯಿಯ ಅಗತ್ಯವಿದೆ ಎಂದು ಹೇಳಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಾರ್ಷಿಕ ಸಭೆ ಇತ್ತೀಚೆಗೆ ನಡೆದಿದ್ದು, 2023 -24ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಲಾಗಿದೆ. ಕಳೆದ ವರ್ಷ 676 ಕೋಟಿ ರೂಪಾಯಿ ಖರ್ಚಾಗಿದ್ದು. 363 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. 204 ಕೋಟಿ ರೂ. ಬ್ಯಾಂಕ್ ನೀಡಿದ ಬಡ್ಡಿ ಹಣವಾಗಿದ್ದು, 58 ಕೋಟಿ ರೂ. ದೇಣಿಗೆ ರೂಪದಲ್ಲಿ ಬಂದಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷದಲ್ಲಿ ರಾಮ ಮಂದಿರಕ್ಕೆ ಭಕ್ತರಿಂದ 20 ಕೆಜಿ ಚಿನ್ನ, 1300 ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಸೆಪ್ಟೆಂಬರ್ ನಲ್ಲಿ ಆದಾಯ ತೆರಿಗೆ ಪಾವತಿಸಲಿದ್ದು, ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಬದ್ಧವಿರುವುದಾಗಿ ಅವರು ತಿಳಿಸಿದ್ದಾರೆ.