![](https://kannadadunia.com/wp-content/uploads/2024/02/WhatsApp-Image-2024-02-11-at-6.01.33-AM-1.jpeg)
ಬೆಂಗಳೂರು : ಶ್ರೀರಾಮ ತನ್ನ ಆಡಳಿತದ ಅವಧಿಯಲ್ಲಿ ಮಹಿಳೆಯರನ್ನು ಅಗೌರವದಿಂದ ನಡೆಸಿಕೊಂಡಿದ್ದ ಹೀಗಾಗಿ ನಮಗೆ ರಾಮರಾಜ್ಯಕ್ಕಿಂತ ಡಾ.ಬಿ.ಆರ್. ಅಂಬೇಡ್ಕರ್ ಅವರ ಭೀಮರಾಜ್ಯ ಸ್ಥಾಪನೆಯ ಅಗತ್ಯವಿದೆ ಎಂದು ಎಂದು ಚಿತ್ರದುರ್ಗದ ಹರಳಯ್ಯ ಗುರುಪೀಠದ ಶ್ರೀ ಬಸವಹರಳಯ್ಯ ಹೇಳಿಕೆ ನೀಡಿದ್ದಾರೆ.
ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಯೋಧ್ಯೆಯ ರಾಮಮಂದಿರದಲ್ಲಲಿ ರಾಮ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಕಲ್ಲಿಗೆ ಜೀವ ಕೊಟ್ಟು ಬದುಕಿಸಿದ್ದೇವೆ ಎಂದು ಹೇಳಿ ಜನರನ್ನು ಮೋಸ ಮಾಡಲಾಗುತ್ತಿದೆ. ರಾಮಮಂದಿರಕ್ಕೆ ಸುತ್ತೂರು ಮಠದ ಶ್ರೀಗಳನ್ನೇ ಒಳಗೆ ಬಿಡಲಿಲ್ಲ. ಇದು ನಮ್ಮೆಲ್ಲರಿಗೂ ಪಾಠವಾಗಬೇಕು ಎಂದರು.
ರಾಮ ಸ್ತ್ರೀಯರನ್ನು ಅಗೌರವವಾಗಿ ನಡೆಸಿಕೊಂಡಿದ್ದ. ತಮ್ಮ ಪತ್ನಿ ಸೀತೆಯನ್ನು ಅಗ್ನಿ ಪರೀಕ್ಷೆ ನಡೆಸಿದ್ದ. ಅಷ್ಟೇ ಅಲ್ಲ. ಅನಂತರ ಕಾಡಿಗೂ ಕಳುಹಿಸಿದ್ದ. ಶೂರ್ಪನಖಿಯ ಮೂಗು ಕುಯ್ದಿದ್ದ. ಹೀಗಾಗಿ ನಮಗೆ ರಾಮರಾಜ್ಯಕ್ಕಿಂತ ಭೀಮ ರಾಜ್ಯ ಸ್ಥಾಪನೆಯ ಅಗತ್ಯವಿದೆ ಎಂದು ಹೇಳಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕಾಯಕ ಶರಣರ ಜಯಂತಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ಎಸ್ ತಂಗಡಗಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸದರಿ ಕಾರ್ಯಕ್ರಮದಲ್ಲಿ ಶ್ರೀ ಪರಮಪೂಜ್ಯ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳು, ಶ್ರೀ ಪರಮಪೂಜ್ಯ ಬಸವ ಹರಳಯ್ಯ ಸ್ವಾಮೀಜಿಯವರು ಮತ್ತು ಶ್ರೀ ಬಸವಪ್ರಭು ಸ್ವಾಮೀಜಿ, ಹರಳಯ್ಯ ಗುರುಪೀಠ, ಬೀದರ್ ಇವರು ದಿವ್ಯಸಾನಿಧ್ಯ ವಹಿಸಿದ್ದರು.
ಸದರಿ ಕಾರ್ಯಕ್ರಮದಲ್ಲಿ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಶ್ರೀ ಕೆ. ಹೆಚ್. ಮುನಿಯಪ್ಪನವರು, ಮಾಜಿ ಸಚಿವರಾದ ಶ್ರೀ ಹೆಚ್. ಆಂಜನೇಯರವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಎನ್. ಮಂಜುಳಾ ಭಾ.ಆ.ಸೇ. ರವರು, ಇಲಾಖೆಯ ನಿರ್ದೇಶಕರಾದ ಡಾ. ಧರಣೀದೇವಿ ಮಾಲಗತ್ತಿ ಭಾ.ಪೊ.ಸೇ. ರವರು, ಸಮುದಾಯದ ಮುಖಂಡರು, ಇಲಾಖೆಯ ಅಧಿಕಾರಿ-ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.