
ಬೆಂಗಳೂರು: ರೀಲ್ಸ್ ಹುಚ್ಚಿಗೆ ಲಾಂಗ್ ಹಿಡಿದು ರೀಲ್ಸ್ ವಿಡಿಯೋ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಬೆನ್ನಲ್ಲೇ ಇದೀಗ ಮತ್ತೋರ್ವ ಬಿಗ್ ಬಾಸ್ ಮಾಜಿ ಸ್ಪರ್ಧಿಗೂ ಸಂಕಷ್ಟ ಎದುರಾಗಿದೆ.
ಬಿಗ್ ಬಾಸ್ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ವಿರುದ್ಧ ನಾಡದೇವಿ ಚಾಮುಂಡೇಶ್ವರಿ ತಾಯಿಗೆ ಅವಮಾನ ಮಾಡಿರುವ ಆರೋಪದಲ್ಲಿ ಹಿಂದೂ ಪರ ಸಂಘಟನೆಗಳು ದೂರು ನೀಡಲು ಮುಂದಾಗಿವೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚಲರ್ಸ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಸ್ಪರ್ಧಿಸಿರುವ ರಕ್ಷಕ್ ಬುಲೆಟ್, ಸಹ ಸ್ಪರ್ಧಿಯನ್ನು ಹೊಗಳುವ ಬರದಲ್ಲಿ ಚಾಮುಂಡೇಶ್ವರಿ ದೇವಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಭರ್ಜರಿ ಬ್ಯಾಚಲರ್ಸ್ ಸೀಸನ್-2ದಲ್ಲಿ ರಕ್ಷಕ್ ಗೆ ಜೊತೆಯಾಗಿ ರಮೋಲಾ ಸ್ಪರ್ಧಿಸಿದ್ದು, ಕಾರ್ಯಕ್ರಮದ ವೇಳೆ ರಕ್ಷಕ್ ರಮೋಲಾಳನ್ನು ಹೊಗಳುವ ಡೈಲಾಗ್ ನಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ’ನಿಮ್ಮನ್ನು ನೋಡ್ತಾ ಇದ್ದರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು, ಸೀರೆ, ಒಡವೆ ಬಿಚ್ಚಿಟ್ಟು ಪ್ಯಾಂಟು, ಶರ್ಟು ಹಾಕಿಕೊಂಡು ಸ್ವಿಟ್ಜರ್ಲೆಂಡ್ ನಲ್ಲಿ ಟ್ರಿಪ್ ಹೊಡೆಯುತ್ತಿದ್ದಾಳೆ ಅನ್ನಿಸುತ್ತಿದೆ’ ಎಂದಿದ್ದಾರೆ.
ರಕ್ಷಕ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ತಾಯಿ ಚಾಮುಂಡಿ ದೇವಿಗೆ ಅವಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಕ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಈ ನಡುವೆ ಹಿಂದೂ ಪರ ಸಂಘಟನೆಗಳು ರಕ್ಷಕ್ ವಿರುದ್ಧ ಕಮಿಷನರ್ ಗೆ ದೂರು ನೀಡಲು ಮುಂದಾಗಿವೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿವೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.