ಮಂಗಳೂರು: ಮಂಗಳೂರಿನ ಕಾಟಿಪಳ್ಳದ ಖಾಸಗಿ ಶಾಲೆಯೊಂದರಲ್ಲಿ ಮಕ್ಕಳ ಕೈಯಲ್ಲಿದ್ದ ರಾಖಿಯನ್ನು ಶಿಕ್ಷಕರು ಕಿತ್ತೆಸೆದ ಘಟನೆ ನಡೆದಿದ್ದು, ಇದರಿಂದ ಸಿಟ್ಟಿಗೆದ್ದ ಪೋಷಕರು, ಬಿಜೆಪಿ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಕ್ಷಾಬಂಧನ ಹಿನ್ನೆಲೆಯಲ್ಲಿ ಮಕ್ಕಳು ರಾಖಿ ಕಟ್ಟಿಕೊಂಡು ಶಾಲೆಗೆ ಬಂದಿದ್ದರು, ಕ್ರಿಶ್ಚಿಯನ್ ಆಡಳಿತಕ್ಕೆ ಒಳಪಟ್ಟ ಖಾಸಗಿ ಶಾಲೆಯ ಕೆಲವು ಶಿಕ್ಷಕರು ಮಕ್ಕಳ ಕೈಯಲ್ಲಿದ್ದ ರಾಖಿ ತೆಗೆಸಿ ಕಸದ ಬುಟ್ಟಿಗೆ ಎಸೆದಿದ್ದಾರೆ. ಈ ವಿಚಾರ ತಿಳಿದ ಪೋಷಕರು ಶಾಲೆಗೆ ದೌಡಾಯಿಸಿ ಶಿಕ್ಷಕರನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ಮುಖಂಡರು ಕೂಡ ಜೊತೆಗೂಡಿದ್ದಾರೆ. ಮಕ್ಕಳ ಕೈಯಲ್ಲಿದ್ದ ರಕ್ಷಾಬಂಧನದ ರಾಖಿ ಕಿತ್ತೆಸಿದ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ ಸುರತ್ಕಲ್ ಠಾಣೆ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ. ಕೊನೆಗೆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಂಸ್ಥೆಯ ಫಾದರ್ ಗೆ ಪೋಷಕರು ರಾಖಿ ಕಟ್ಟಿದ್ದಾರೆ.