
ಆದಿಲ್ ಖಾನ್ ದುರ್ರಾನಿ ಅವರನ್ನು ಮದುವೆಯಾಗಿ ನಂತರ ವಂಚನೆ ಆರೋಪದ ಮೇಲೆ ಅವರನ್ನು ಜೈಲಿಗೆ ಕಳುಹಿಸಿರುವ ನಟಿ ರಾಖಿ ಸಾವಂತ್ ದುಬೈನಲ್ಲಿ ರಾಖಿ ಸಾವಂತ್ ಅಕಾಡೆಮಿ ತೆರೆದಿದ್ದಾರೆ.
ಉದ್ಘಾಟನೆ ಬಳಿಕ ವಾಪಸಾದ ಅವರು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದು, ದುಬೈನಲ್ಲಿರುವ ತಮ್ಮ ಹೊಸ ಮನೆಯ ಬಗ್ಗೆ ತಿಳಿಸಿದ್ದಾರೆ. ದುಬೈನಲ್ಲಿ ಡಾನ್ಸ್ ಅಕಾಡೆಮಿಯನ್ನು ತೆರೆದಿದ್ದೇನೆ. ಅದಕ್ಕಾಗಿ ಅಲ್ಲಿಗೆ ಹೋಗಿದ್ದೆ ಎಂದ ರಾಖಿ, ದುಬೈನಲ್ಲಿ ಹೊಸ ಮನೆ ಮತ್ತು ಕಾರನ್ನು ಖರೀದಿಸಿರುವುದಾಗಿ ಹೇಳಿದರು.
ನಂತರ ಅತ್ತ ಕೈ ಮಾಡುತ್ತಾ ಕಂಬನಿ ಮಿಡಿಯುತ್ತಾ, ಇದೇ ಸ್ಥಳದಲ್ಲಿ ನಾನು ಪತಿ ಆದಿಲ್ ಖಾನ್ ದುರಾನಿಯನ್ನು ಗುಲಾಬಿ ದಳಗಳೊಂದಿಗೆ ಸ್ವಾಗತಿಸಿದ್ದೆ ಎಂದರು. ಕಳೆದ ವರ್ಷ ಜುಲೈನಲ್ಲಿ ಆದಿಲ್ಗೆ ಗುಲಾಬಿ ದಳಗಳಿಂದ ಧಾರೆ ಎರೆದಿದ್ದ ಸ್ಥಳ ಇದೇ ಆಗಿದೆ. ಆದರೆ ಈಗ ಬದುಕೇ ಸರ್ವ ನಾಶ ಆಗಿದೆ ಎಂದು ಕಣ್ಣೀರಿಟ್ಟರು.
ಇದೇ ಸಂದರ್ಭದಲ್ಲಿ ಹೋಳಿ ಹಬ್ಬದ ಶುಭಾಶಯವನ್ನು ಅವರು ಕೋರುತ್ತಾ, ನನ್ನ ಜೀವನದ ಬಣ್ಣಗಳೆಲ್ಲಾ ಕಳೆದು ಹೋಗಿವೆ. ಇನ್ನು ನಿಮಗಾದರೂ ನಿಮ್ಮ ಜೀವನದ ಬಣ್ಣ ಸಿಗಲಿ ಎನ್ನುತ್ತಲೇ ಕಣ್ಣೀರು ಹಾಕುತ್ತಾ ಅಲ್ಲಿಂದ ತೆರಳಿದರು. ಇದನ್ನು ನೋಡಿದ ನೆಟ್ಟಿಗರು ಡ್ರಾಮಾ ಕ್ವೀನ್ ಎಂದು ಕಾಲೆಳೆಯುತ್ತಿದ್ದಾರೆ.