
ಬಾಲಿವುಡ್ ನಟಿ ರಾಖಿ ಸಾವಂತ್ ತನ್ನ ಬಿಂದಾಸ್ ನಡವಳಿಕೆಯಿಂದಲೇ ಹೆಚ್ಚು ಪ್ರಸಿದ್ಧಿ. ಅಲ್ಲದೆ ಪದೇ ಪದೇ ಗಿಮಿಕ್ ಮಾಡುವ ಕಾರಣ ಇತ್ತೀಚೆಗಿನ ಆಕೆಯ ಅನಾರೋಗ್ಯದ ಕುರಿತು ಅಭಿಮಾನಿಗಳಲ್ಲಿ ಅನುಮಾನ ಮೂಡಿತ್ತು. ಆ ಸಂದರ್ಭದಲ್ಲಿ ರಾಖಿಯ ಮಾಜಿ ಪತಿ ರಿತೇಶ್ ಸಿಂಗ್ ಹೆಲ್ತ್ ಅಪ್ಡೇಟ್ ಕುರಿತು ಮಾಹಿತಿ ನೀಡಿದ್ದರು.
ರಾಕಿ ಸಾವಂತ್ ಮೂತ್ರಕೋಶದಲ್ಲಿ ಗಡ್ಡೆ ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಆಕೆ ಮಾರಣಾಂತಿಕ ಪರಿಸ್ಥಿತಿ ಎದುರಿಸುತ್ತಿದ್ದು, ಅಭಿಮಾನಿಗಳು ರಾಖಿಯ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದರು.
ಇದೀಗ ರಿತೇಶ್, ರಾಖಿ ಸಾವಂತ್ ಅವರ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವ ರಾಖಿ ಆಸ್ಪತ್ರೆ ಸಿಬ್ಬಂದಿ ಸಹಾಯದೊಂದಿಗೆ ನಡೆಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆಕೆ ನೋವಿನಿಂದ ಕಣ್ಣೀರಿಡುತ್ತಿರುವುದು ಹಾಗೂ ಮಾಜಿ ಪತಿ ಸಂತೈಸುತ್ತಿರುವುದು ಕಾಣಬಹುದು.