
ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿ(ಕೆ ರೇರಾ) ಮುಖ್ಯಸ್ಥರಾಗಿ ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಐದು ವರ್ಷಗಳ ಅವಧಿಗೆ ರಾಕೇಶ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಕೆ ರೇರಾ ಮುಖ್ಯಸ್ಥರಾಗಿ ರಾಕೇಶ್ ಸಿಂಗ್ ಅಧಿಕಾರ ವಹಿಸಿಕೊಂಡ ದಿನದಿಂದ 5 ವರ್ಷ ಅಥವಾ ಅವರಿಗೆ 65 ವರ್ಷ ಪೂರ್ಣಗೊಳ್ಳುವುದರಲ್ಲಿ ಯಾವುದೋ ಮೊದಲು ಆ ದಿನಾಂಕದವರೆಗೆ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ನಿಕಟಪೂರ್ವ ಚೇರ್ಮನ್ ಹೆಚ್.ಸಿ. ಕಿಶೋರ ಚಂದ್ರ ಅವರ ಸೇವಾ ನಿವೃತ್ತಿಯಿಂದಾಗಿ ಕೆ ರೇರಾ ಹುದ್ದೆ ಖಾಲಿಯಾಗಿತ್ತು.
ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ರಾಕೇಶ್ ಸಿಂಗ್ ಇತ್ತೀಚೆಗಷ್ಟೇ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರು. ಬಿಬಿಎಂಪಿ ಆಡಳಿತಾಧಿಕಾರಿ, ಬಿಡಿಎ ಆಯುಕ್ತ, ಕೆಎಂಎಫ್ ಎಂ.ಡಿ. ಸೇರಿ ಹಲವು ಹುದ್ದೆಗಳಲ್ಲಿ ಅವರು ಕಾರ್ಯ ನಿರ್ವಹಿಸಿದ್ದಾರೆ.