
ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಗಳನ್ನು ಸ್ವೀಕರಿಸದೆ ಅರ್ಹರ ಸಾಧನೆ ಗುರುತಿಸಿ ಪ್ರಶಸ್ತಿಯನ್ನು ಅವರ ಮನೆ ಬಾಗಿಲಿಗೆ ಹೋಗಿ ನೀಡುವ ಹೊಸ ಅಧ್ಯಾಯ ಆರಂಭಿಸುವ ಚಿಂತನೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದ್ದಾರೆ.
ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಾಹಿತ್ಯ ಶ್ರೀ ಮತ್ತು ಪುಸ್ತಕ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಪ್ರಶಸ್ತಿಯನ್ನು ಕೇಳಿ ಪಡೆಯಬಾರದು, ಸಾಧಕರ ಸಾಧನೆಯನ್ನು ಗುರುತಿಸಿ ಹುಡುಕಿ ಪ್ರಶಸ್ತಿಯನ್ನು ಅವರ ಮನೆ ಬಾಗಿಲಿಗೆ ನೀಡಿ ಗೌರವಿಸುವಂತಾಗಬೇಕು. ಇದು ಪ್ರಶಸ್ತಿಯ ಮೌಲ್ಯ ಹೆಚ್ಚಿಸುತ್ತದೆ. ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾಡಿನ ಸಾಹಿತಿಗಳು ಇನ್ನಷ್ಟು ಉತ್ತಮ ಸಲಹೆ ನೀಡಬೇಕು. ಅರ್ಜಿ ಸ್ವೀಕರಿಸದೇ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಚರ್ಚೆಯಾಗಬೇಕು. ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ ಪರಿಪಾಲಿಸಿಕೊಂಡು ಅರ್ಹರನ್ನು ಗುರುತಿಸುವಂತಹಾಗಬೇಕು ಎಂದು ಹೇಳಿದ್ದಾರೆ.