ಬೆಂಗಳೂರು: ಆತ್ಮಸಾಕ್ಷಿ ಮತಗಳು ಬಿಜೆಪಿ ಅಭ್ಯರ್ಥಿಗೆ ಹೋಗಿದೆ ಎಂದು ಹೇಳುವ ಮೂಲಕ ಜೆಡಿಎಸ್ ನಾಯಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
ರಾಜ್ಯಸಭಾ ಚುನಾವಣೆ ಮತದಾನ ವಿಚಾರವಾಗಿ ಮಾತನಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು ಅಲ್ಲವೇ? ಬಿಜೆಪಿಯವರು 48 ಮತಗಳನ್ನು ಹಾಕಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. 45 ಮತಗಳು ಬಿಜೆಪಿ ಅಭ್ಯರ್ಥಿ ಗೆಲ್ಲಲು ಸಾಕಿತ್ತು. ಉಳಿದ ಮತಗಳನ್ನು ಜೆಡಿಎಸ್ ಗೆ ಹಾಕಿಸಬಹುದಿತ್ತು. ಆದರೂ ಹಾಗೆ ಮಾಡಿಲ್ಲ ಯಾಕೆ? ಆತ್ಮಸಾಕ್ಷಿ ಮತಗಳು ಬಿಜೆಪಿ ಅಭ್ಯರ್ಥಿಗೆ ಹೋಗಿದೆ ಎಂದು ಹೇಳುವ ಮೂಲಕ ಬಿಜೆಪಿ ಜೆಡಿಎಸ್ ಗೆ ಮೋಸ ಮಾಡಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವಾಗ ಬಿಜೆಪಿಯವರು ಮೂರು ಹೆಚ್ಚುವರಿ ಮತಗಳನ್ನು ಯಾಕೆ ಹಾಕಿಸಿಕೊಂಡರು? ಅವುಗಳನ್ನು ಜೆಡಿಎಸ್ ನ ಕುಪೇಂದ್ರ ರೆಡ್ಡಿಗೆ ಹಾಕಿಸಬಹುದಿತ್ತಲ್ಲವೇ? ಆತ್ಮಸಾಕ್ಷಿ ಮತಗಳ ಬಗ್ಗೆ ಮಾತನಾಡುವವರು ತಾವೇಕೆ ಆತ್ಮಸಾಕ್ಷಿಯಾಗಿ ನಡೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.