ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಅಡ್ಡಮತ ಚಲಾಯಿಸಲು ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಹಣದ ಆಮಿಷವೊಡ್ಡಿ, ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಿಯೋಗ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ದೂರು ನೀಡಿದೆ.
ಕಾಂಗ್ರೆಸ್ ಬೆಂಬಲಿತ ಶಾಸಕರಾದ ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿ ಗೌಡ ಹಾಗೂ ದರ್ಶನ್ ಪುಟ್ಟಣ್ಣಯ್ಯಗೆ ಮತ ಹಾಕುವಂತೆ ಆಮಿಷವೊಡ್ಡಿ ಬೆದರಿಕೆ ಹಾಕಲಾಗಿದೆ. ಹೋಟೆಲ್ ಮಾಲೀಕರೊಬ್ಬರು ಲತಾ ಮಲ್ಲಿಕಾರ್ಜುನ್ ಗೆ ಕರೆ ಮಾಡಿ ಕುಪೇಂದ್ರ ರೆಡ್ಡಿ ಅವರ ಪುತ್ರ ನಿಮ್ಮನ್ನು ಭೇಟಿಯಾಗಿ ಹಣ ನೀಡುತ್ತಾರೆ. ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕದಿದ್ದರೆ ನಿಮಗೆ ತೊಂದರೆಯಾಗಲಿದೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಅಲ್ಲದೇ ಪುಟ್ಟಸ್ವಾಮಿ ಗೌಡ, ದರ್ಶನ್ ಪುಟ್ಟಣ್ಣಯ್ಯ ಅವರಿಗೂ ಬಿಜೆಪಿ, ಜೆಡಿಎಸ್ ಹಿಂಬಾಲಕರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಹಣದ ಆಮಿಷವೊಡ್ಡಿ, ಬೆದರಿಕೆ ಹಾಕಿದ ಸಾಕ್ಷಿಗಳಿದ್ದು, ಪ್ರಕರಣ ದಾಖಲುಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ತಮ್ಮ ಪಕ್ಷದ ಸದಸ್ಯರು, ಸ್ವತಂತ್ರ ಅಭ್ಯರ್ಥಿಗಳಿಗೆ ರಕ್ಷಣೆ ನೀಡುವಂತೆ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ.