ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಫೆಬ್ರವರಿ 8ರಂದು ಅಧಿಸೂಚನೆ ಹೊರಬೀಳಲಿದೆ.
ಫೆಬ್ರವರಿ 15 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಫೆಬ್ರವರಿ 16ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಫೆಬ್ರವರಿ 20 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಫೆಬ್ರವರಿ 27ರಂದು ಮತದಾನ, ಮತ ಎಣಿಕೆ ನಡೆಯಲಿದೆ.
ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಆಧರಿಸಿ ಕಾಂಗ್ರೆಸ್ ಪಕ್ಷಕ್ಕೆ ಮೂರು ಸ್ಥಾನಗಳು ಸಿಗುತ್ತವೆ. ಇಬ್ಬರು ಹಾಲಿ ಸದಸ್ಯರೇ ಮುಂದುವರೆಯುವ ನಿರೀಕ್ಷೆ ಇದೆ. ಮೂರನೇ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸುವ ಹೆಸರಿನ ಬಗ್ಗೆ ಕುತೂಹಲ ಮೂಡಿದೆ.
ಹಾಲಿ ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ನ ಜಿ.ಸಿ. ಚಂದ್ರಶೇಖರ್, ಡಾ. ಹನುಮಂತಯ್ಯ, ನಾಸಿರ್ ಹುಸೇನ್ ಅವರ ಅವಧಿ ಏಪ್ರಿಲ್ 2ರಂದು ಮುಕ್ತಾಯವಾಗಲಿದೆ. ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್ ಗೆ ಮತ್ತೊಮ್ಮೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದ ಮೂರನೇ ಅಭ್ಯರ್ಥಿಯಾಗಿ ದೆಹಲಿ ಹೈಕಮಾಂಡ್ ಸೂಚಿಸುವ ಹೊಸ ಹೆಸರಿನ ಕುರಿತಾಗಿ ಕುತೂಹಲ ಮೂಡಿದೆ. ಬಿಜೆಪಿ –ಜೆಡಿಎಸ್ ಮೈತ್ರಿಕೂಟದ ತಂತ್ರಗಾರಿಕೆ ಭಾಗವಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.