
ಐದು ರಾಜ್ಯಗಳಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸುವುದರೊಂದಿಗೆ ಆರು ರಾಜ್ಯಗಳಾದ್ಯಂತ 13 ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕನಿಷ್ಠ ಐದು ಸ್ಥಾನಗಳಲ್ಲಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಕೇಸರಿ ಪಕ್ಷವು ಪ್ರಸ್ತುತ 97 ಬಲವನ್ನು ಹೊಂದಿದೆ.
ಮತ್ತೊಂದೆಡೆ, ಮೇಲ್ಮನೆಗೆ ಮತ್ತೊಂದು ಸುತ್ತಿನ ದ್ವೈವಾರ್ಷಿಕ ಚುನಾವಣೆಗಳು ನಡೆಯಲಿರುವ ಈ ವರ್ಷದ ಜುಲೈ ವೇಳೆಗೆ ಕಾಂಗ್ರೆಸ್ ತನ್ನ ವಿರೋಧ ಪಕ್ಷದ ನಾಯಕನ ಸ್ಥಾನಮಾನವನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ.
ಇನ್ನು ನಿವೃತ್ತರಾಗುತ್ತಿರುವ 72 ಸದಸ್ಯರಿಗೆ ರಾಜ್ಯಸಭೆಯು ವಿದಾಯ ಹೇಳಲಿದ್ದು, ಸಭಾಪತಿ ಎಂ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಸಭಾನಾಯಕ ಪಿಯೂಷ್ ಗೋಯಲ್ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಮಾತನಾಡಿ ಏಳು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಈ 72 ಸದಸ್ಯರನ್ನು ಬೀಳ್ಕೊಡಲಿದ್ದಾರೆ.
ಈ ಸಂದರ್ಭದಲ್ಲಿ ನಾಯಕರು ಮತ್ತು ಸದಸ್ಯರಿಗೆ ಮಾತನಾಡಲು ಅನುಕೂಲವಾಗುವಂತೆ ಶೂನ್ಯ ವೇಳೆ ಮತ್ತು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಹೇಳಲಾಗಿದೆ.