ಇತ್ತೀಚೆಗಷ್ಟೆ ಮುಕ್ತಾಯವಾದ ಪಂಚರಾಜ್ಯಗಳ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದ ಬಿಜೆಪಿ, ಮೇಲ್ಮನೆಯಲ್ಲೂ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ. ಒಟ್ಟು 13 ರಾಜ್ಯಗಳಲ್ಲಿ ಮಾರ್ಚ್ ಹಾಗೂ ಜೂನ್ ನಲ್ಲಿ ರಾಜ್ಯಸಭಾ ಚುನಾವಣೆ ನಡೆಯಲಿದೆ.
ಮಾರ್ಚ್ 31ರಂದು 13 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆಸ್ಸಾಂನ 1 ಸ್ಥಾನ, ಹಿಮಾಚಲ ಪ್ರದೇಶದ 2 ಸ್ಥಾನ, ಕೇರಳದ ಮೂರು, ನಾಗಾಲ್ಯಾಂಡ್ ನ 1 ಸ್ಥಾನ, ತ್ರಿಪುರಾದಲ್ಲಿ 1 ಸ್ಥಾನ, ಪಂಜಾಬ್ ನಲ್ಲಿ 5 ಸ್ಥಾನಗಳಿಗೆ ಹೊಸ ಸದಸ್ಯರ ಆಯ್ಕೆಯಾಗಲಿದೆ. ಒಟ್ಟಾರೆ 245 ಸದಸ್ಯ ಬಲದ ಮೇಲ್ಮನೆಯಲ್ಲಿ 97 ಬಿಜೆಪಿ ಸದಸ್ಯರಿದ್ದಾರೆ.
ಅಸ್ಸಾಂ: ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ, ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಎನ್ಡಿಎ ಎರಡೂ ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಬಿಜೆಪಿಯ ಪಬಿತ್ರಾ ಮಾರ್ಗರಿಟಾ ಮತ್ತು ಪಾಲುದಾರ ಪಕ್ಷ ಯುಪಿಪಿಎಲ್ ನ ರುಂಗ್ವ್ರಾ ನರ್ಜಾರಿ ಅವರನ್ನು ಕೇಸರಿ ಪಕ್ಷ ಬೆಂಬಲಿಸಿದೆ. ಇನ್ನೊಂದೆಡೆ ರಿಪುನ್ ಬೋರಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ. ರಾನೀ ನಾರಾ ಮತ್ತು ರಿಪುನ್ ಬೋರಾ ಅವರ ರಾಜ್ಯಸಭಾ ಸ್ಥಾನಗಳು ಏಪ್ರಿಲ್ 2 ರಂದು ತೆರವಾಗಲಿವೆ.
ಕೇರಳ: ರಾಜ್ಯಸಭೆಯ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ತನ್ನ ಮಹಿಳಾ ಘಟಕದ ಅಧ್ಯಕ್ಷೆ ಜೆಬಿ ಮಾಥರ್ ಅವರನ್ನು ನಾಮನಿರ್ದೇಶನ ಮಾಡಿದೆ. ಆಡಳಿತಾರೂಢ ಎಲ್ಡಿಎಫ್ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಎ.ಎ.ರಹೀಮ್ ಮತ್ತು ಸಿಪಿಐನ ಪಿ. ಸಂತೋಷ್ ಕುಮಾರ್ ಕೂಡ ಕಣದಲ್ಲಿದ್ದಾರೆ. ಎ.ಕೆ. ಆಂಟನಿ, ಎಂ.ವಿ. ಶ್ರೇಯಾಂಶ್ ಕುಮಾರ್ ಮತ್ತು ಸೋಮಪ್ರಸಾದ್.ಕೆ ಅವರ ಅಧಿಕಾರಾವಧಿಯು ಮುಕ್ತಾಯಗೊಳ್ತಾ ಇದೆ. 140 ಸದಸ್ಯರ ಅಸೆಂಬ್ಲಿಯಲ್ಲಿ ಎಲ್ಡಿಎಫ್ 99 ಸ್ಥಾನಗಳನ್ನು ಹೊಂದಿರುವ ಕಾರಣ, ಅದು ಎರಡೂ ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ ತನ್ನ ಏಕೈಕ ಸ್ಥಾನವನ್ನು ಉಳಿಸಿಕೊಳ್ಳಬಹುದು.
ತ್ರಿಪುರಾ: ತ್ರಿಪುರಾದ ಏಕೈಕ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ತನ್ನ ರಾಜ್ಯಾಧ್ಯಕ್ಷ ಡಾ.ಮಾಣಿಕ್ ಸಹಾ ಅವರನ್ನು ನಾಮನಿರ್ದೇಶನ ಮಾಡಿದ್ದು, ಎಡರಂಗವು ಹಿರಿಯ ಸಿಪಿಐ(ಎಂ) ಮುಖಂಡ ಭಾನು ಲಾಲ್ ಸಹಾ ಅವರನ್ನು ಹೆಸರಿಸಿದೆ. 60 ಸ್ಥಾನಗಳಲ್ಲಿ 40 ಸ್ಥಾನಗಳನ್ನು ಹೊಂದಿದ್ದರೂ ಬಿಜೆಪಿ ಏಕೈಕ ರಾಜ್ಯಸಭಾ ಸ್ಥಾನವನ್ನು ಗೆಲ್ಲುವ ನಿರೀಕ್ಷೆಯಿದೆ. ಪ್ರಸ್ತುತ ಸಂಸತ್ ಸದಸ್ಯರಾಗಿರುವ ಜರ್ನಾ ದಾಸ್ ಬೈದ್ಯ ಅವರು ಏಪ್ರಿಲ್ 2 ರಂದು ರಾಜೀನಾಮೆ ನೀಡಲಿದ್ದಾರೆ.
ಪಂಜಾಬ್: ಎಎಪಿ, ತನ್ನ ಪಂಜಾಬ್ ಉಸ್ತುವಾರಿ ರಾಘವ್ ಚಡ್ಡಾ, ಐಐಟಿ ದೆಹಲಿ ಪ್ರೊಫೆಸರ್ ಸಂದೀಪ್ ಪಾಠಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಚಾನ್ಸೆಲರ್ ಅಶೋಕ್ ಮಿತ್ತಲ್, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಲುಧಿಯಾನ ಮೂಲದ ಉದ್ಯಮಿ ಸಂಜೀವ್ ಅರೋರಾ ಅವರನ್ನು ತನ್ನ ಐದು ರಾಜ್ಯಸಭಾ ನಾಮನಿರ್ದೇಶನಗಳಾಗಿ ಹೆಸರಿಸಿದೆ. ಈ ಐವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನಿಂದ ಆಪ್ ಉತ್ಸಾಹದಲ್ಲಿದೆ.
ಹಿಮಾಚಲ ಪ್ರದೇಶ: 68 ಸ್ಥಾನಗಳ ಹಿಮಾಚಲ ವಿಧಾನಸಭೆಯಲ್ಲಿ 43 ಸ್ಥಾನಗಳನ್ನು ಬಿಜೆಪಿ ಹೊಂದಿದೆ. ಹಾಗಾಗಿ ಬಿಜೆಪಿಯ ಅಬ್ಯರ್ಥಿ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಸಿಕಂದರ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಇಲ್ಲಿ ಪ್ರತಿಸ್ಪರ್ಥಿಯನ್ನು ಕಣಕ್ಕಿಳಿಸಿಲ್ಲ.
ನಾಗಾಲ್ಯಾಂಡ್: ನಾಗಾಲ್ಯಾಂಡ್ ಭಾರತದ ಏಕೈಕ ವಿರೋಧ ಮುಕ್ತ ರಾಜ್ಯವಾಗಿದೆ. ಚುನಾಯಿತ S Phangnon Konyak ಅವರು ಅವಿರೋಧವಾಗಿ ಆಯ್ಕೆಯಾದರು, ಮೇಲ್ಮನೆಯಲ್ಲಿ ರಾಜ್ಯದ ಮೊದಲ ಮಹಿಳಾ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜ್ಯ ಬಿಜೆಪಿ ಮಹಿಳಾ ಶಾಖೆಯ ಅಧ್ಯಕ್ಷೆ ಕೊನ್ಯಾಕ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಏಕೈಕ ಅಭ್ಯರ್ಥಿಯಾಗಿದ್ದರು. ನಾಗಾಲ್ಯಾಂಡ್ನ ಏಕೈಕ ಸಂಸದ, ನಾಗಾ ಪೀಪಲ್ಸ್ ಫ್ರಂಟ್ನ ಕೆ.ಜಿ ಕೀನ್ಯಾ ಅವರು ಏಪ್ರಿಲ್ 2 ರಂದು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.