ಪ್ರಶ್ನೆ ಕೇಳದಂತೆ ಸುಬ್ರಮಣಿಯನ್ ಸ್ವಾಮಿಗೆ ನಿರ್ಬಂಧ….! 02-12-2021 7:11AM IST / No Comments / Posted In: Latest News, India, Live News ಲಡಾಖ್‌ನಲ್ಲಿ ಚೀನಿ ಪಡೆಗಳು ವಾಸ್ತವ ನಿಯಂತ್ರಣ ರೇಖೆ ದಾಟಿದವೇ ಎಂಬ ಪ್ರಶ್ನೆಯೊಂದನ್ನು ಕೇಳದಂತೆ ತಮ್ಮನ್ನು ರಾಜ್ಯಸಭಾ ಸೆಕ್ರೇಟರಿಯೇಟ್ ತಡೆ ಹಿಡಿದಿದ್ದಾಗಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆಯ ಸಂಬಂಧ ಸೂಕ್ಷ್ಮ ವಿಷಯಗಳನ್ನು ಒಳಗೊಂಡ ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲ ಎಂಬ ಕಾರಣವನ್ನು ಸ್ವಾಮಿಗೆ ಸೆಕ್ರೇಟರಿಯೇಟ್ ನೀಡಿದೆ. ಕಳೆದ ವರ್ಷದ ಜೂನ್‌ನಲ್ಲಿ ಲಡಾಖ್ ಪ್ರದೇಶದಲ್ಲಿ ಭಾರತ ಹಾಗೂ ಚೀನಿ ತುಕಡಿಗಳ ನಡುವೆ ಘರ್ಷಣೆ ನಡೆದ ಬಳಿಕ ಈ ವಿಚಾರವನ್ನು ವಿಪಕ್ಷಗಳು ಮೇಲ್ಮನೆಯಲ್ಲಿ ಉಲ್ಲೇಖಿಸುತ್ತಾ ಬಂದಿವೆ. ಭಾರತದ ಪ್ರದೇಶವನ್ನು ಯಾರೊಬ್ಬರೂ ಆಕ್ರಮಿಸಿಕೊಂಡಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ವರ್ಷ ಕರೆದಿದ್ದ ಸರ್ವಪಕ್ಷಗಳ ನಿಯೋಗಕ್ಕೆ ತಿಳಿಸಿದ್ದರು. “ರಾಷ್ಟ್ರೀಯ ಹಿತಾಸಕ್ತಿ ಎಂದುಕೊಂಡು ಚೀನೀಯರು ವಾಸ್ತವ ನಿಯಂತ್ರಣ ರೇಖೆ ದಾಟಿದರೋ ಇಲ್ಲವೋ ಎಂಬ ನನ್ನ ಪ್ರಶ್ನೆಯನ್ನು ಕೇಳಲು ಅನುಮತಿ ನೀಡದೆ ಇರುವುದು ರಾಜ್ಯಸಭಾ ಸೆಕ್ರೇಟರಿಯೇಟ್‌ಗೆ ದುರಂತವಲ್ಲದೇ ಇದ್ದರೂ ಹಾಸ್ಯಾಸ್ಪದವಾಗಿದೆ!!!” ಎಂದು ಸ್ವಾಮಿ ಟ್ವೀಟ್ ಮೂಲಕ ಈ ವಿಷಯ ಹೇಳಿಕೊಂಡಿದ್ದಾರೆ. ಸೂಕ್ಷ್ಮ ವಿಷಯಗಳು ಒಳಗೊಂಡ ವಿಚಾರಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ನೀಡುವ ಸೂಚನೆಗಳ ಅನ್ವಯ ರಾಜ್ಯ ಸಭಾ ಸೆಕ್ರೇಟರಿಯೇಟ್ ಕೆಲಸ ಮಾಡುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. It is hilarious if not tragic for Rajya Sabha Secretariat to inform me today that my Question whether the Chinese have crossed the LAC in Ladakh, cannot be allowed “ because of national interest”!!! — Subramanian Swamy (@Swamy39) December 1, 2021