ವರ್ಷದ ಆರಂಭದಲ್ಲಿ ದಿನೇಶ್ ತ್ರಿವೇದಿ ತೆರವು ಮಾಡಿದ್ದ ಪಶ್ಚಿಮ ಬಂಗಾಳ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಆಗಸ್ಟ್ 9ರಂದು ಉಪ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ.
ತೃಣಮೂಲ ಕಾಂಗ್ರೆಸ್ ಸದಸ್ಯರಾಗಿದ್ದ ತ್ರಿವೇದಿ ಫೆಬ್ರವರಿ 12ರಂದು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನ ನಿಯಂತ್ರಣಕ್ಕೆ ತರಲು ತಮ್ಮಿಂದ ಏನೂ ಮಾಡಲು ಆಗುತ್ತಿಲ್ಲ ಹೀಗಾಗಿ ಸದನದಲ್ಲಿ ನನಗೆ ಉಸಿರುಗಟ್ಟಿದಂತಾಗುತ್ತದೆ ಎಂಬ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದರು. ಇದಾದ ಬಳಿಕ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ದಿನೇಶ್ ತ್ರಿವೇದಿ ಅವರ ಅಧಿಕಾರಾವಧಿ ಏಪ್ರಿಲ್ 2026ರಲ್ಲಿ ಕೊನೆಗಾಣಬೇಕಿತ್ತು. ಆದರೆ ಅವರು ಅವಧಿಗೂ ಮುನ್ನ ರಾಜೀನಾಮೆ ನೀಡಿರುವ ಹಿನ್ನೆಲೆ ಚುನಾವಣಾ ಆಯೋಗ ಉಪಚುನಾವಣಾ ದಿನಾಂಕ ಪ್ರಕಟಿಸಿದೆ.
ಉಪಚುನಾವಣೆಗೆ ಜುಲೈ 22ರಂದು ಅಧಿಸೂಚನೆ ಹೊರಡಿಸಲಾಗುವುದು ಹಾಗೂ ಆಗಸ್ಟ್ 9ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮತದಾನ ಮುಗಿದ ದಿನವೇ ಮತ ಎಣಿಕೆ ಕಾರ್ಯ ನಡೆಯಲಿದೆ.
ಉಪಚುನಾವಣೆಯ ವೇಳೆ ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸಬೇಕು ಎಂದು ಚುನಾವಣಾ ಆಯೋಗ ಒತ್ತಿ ಹೇಳಿದೆ.