ಯಾದಗಿರಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಕ್ಟೀವ್ ಆಗಿರುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಂವಿಧಾನ ಬದಲಾವಣೆ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಸ್ವಪಕ್ಷದ ಸಂಸದನ ವಿರುದ್ಧವೇ ಬಿಜೆಪಿ ಉಪಾಧ್ಯಕ್ಷ ರಾಜುಗೌಡ ಕಿಡಿಕಾರಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಗೌಡ, ಅನಂತ್ ಕುಮಾರ್ ಹೆಗಡೆ ಅಲ್ಲ, ಅವರಪ್ಪ ಬಂದ್ರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅನಂತ್ ಕುಮಾರ್ ಹೆಗಡೆ ಈ ಹಿಂದೆ 2018ರಲ್ಲಿಯೂ ಇಂತದ್ದೇ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ಬರೋದಕ್ಕೆ ಕಲ್ಲು ಹಾಕಿದ್ದರು. ಹಿಂದುತ್ವ, ಮೋದಿ ಗಾಳಿಯಲ್ಲಿ ಸಂಸದರಾಗುತ್ತಾರೆ. ಸಂಸದರಾಗಿ ನಾಲ್ಕು ವರ್ಷ ಮಾಯವಾಗ್ತಾರೆ. ಚುನಾವಣೆ ಸಂದರ್ಭದಲ್ಲಿ ಇಂತಹ ಹುಚ್ಚುಚ್ಚಾಗಿ ಹೇಳಿಕೆಗಳನ್ನು ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲ್ಕು ವರ್ಷ ಕಾಣೆಯಾಗಿ ಈಗ ಟಿಕೆಟ್ ಗಾಗಿ ಈ ರೀತಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.