ಕಾರವಾರ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಬೆಳಗ್ಗೆ ಕಾರವಾರ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಯ ಸಿಬ್ಬಂದಿಯೊಂದಿಗೆ ಯೋಗಾಭ್ಯಾಸ ಮಾಡಿದ್ದಾರೆ.
ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ರಾಜನಾಥ್ ಸಿಂಗ್ ಶುಕ್ರವಾರ ಕಾರವಾರ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಯ ಸಿಬ್ಬಂದಿಯೊಂದಿಗೆ ಯೋಗಾಸನದಲ್ಲಿ ಪಾಲ್ಗೊಂಡರು. ಪ್ರಪಂಚದಾದ್ಯಂತ ಯೋಗದ ಸಂದೇಶವನ್ನು ಕೊಂಡೊಯ್ಯಲು ಸಚಿವಾಲಯವು ಅನೇಕ ಕಾರ್ಯಕ್ರಮಗಳ ಮೂಲಕ ಅಂತರರಾಷ್ಟ್ರೀಯ ಯೋಗ ದಿನದ ಪ್ರಚಾರ ಕೈಗೊಂಡಿದೆ.
ಗುರುವಾರ ರಾತ್ರಿ ಕಾರವಾರದಲ್ಲಿ ಭಾರತೀಯ ನೌಕಾಪಡೆಯ ಸಿಬ್ಬಂದಿ ಮತ್ತು ಅವರ ಕುಟುಂಬಗಳೊಂದಿಗೆ ಸಂವಾದ ನಡೆಸಿದ್ದ ರಾಜನಾಥ್ ಸಿಂಗ್ ಇಂದು ಯೋಗಾಭ್ಯಾಸ ಮಾಡಿದ್ದಾರೆ.
ಕಾರವಾರದ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಯ ಸಿಬ್ಬಂದಿ ಮತ್ತು ಅವರ ಕುಟುಂಬಗಳೊಂದಿಗೆ ಸಂವಾದ ನಡೆಸಿದ್ದು ಸಂತೋಷ ತಂದಿದೆ. ನಮ್ಮ ರಕ್ಷಣಾ ಸಿಬ್ಬಂದಿ ಶ್ರದ್ಧೆಯಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಾರೆ. ನಮ್ಮ ದೇಶವನ್ನು ಸುರಕ್ಷಿತವಾಗಿಟ್ಟಿದ್ದಾರೆ. ಅವರ ಕುಟುಂಬ ಸದಸ್ಯರು ಸಹ ಅವರಿಗೆ ಬೆಂಬಲ ಮತ್ತು ಶಕ್ತಿಯನ್ನು ನೀಡುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸುತ್ತಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.