ಚೆನ್ನೈ: ನಟ ರಜನಿಕಾಂತ್ ಅವರಿಗೆ ಸೋಮವಾರ ತಡರಾತ್ರಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಅವರು ಸ್ಥಿರವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.
73 ವರ್ಷದ ರಜನಿಕಾಂತ್ ಮಂಗಳವಾರ ವೈದ್ಯಕೀಯ ಪ್ರಕ್ರಿಯೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿವೆ. ಆದರೆ, ರಜನಿಕಾಂತ್ ಅವರ ಕುಟುಂಬ ಅಥವಾ ಆಸ್ಪತ್ರೆಯಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
2020 ರಲ್ಲಿ ಅಧಿಕ ರಕ್ತದೊತ್ತಡ ನಂತರ ಅವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಒಂದೆರಡು ದಿನಗಳ ಮೊದಲು ಆಸ್ಪತ್ರೆ ಸೇರಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಆರೋಗ್ಯದ ದೃಷ್ಟಿಯಿಂದ ರಾಜಕೀಯಕ್ಕೆ ಬರುವುದಿಲ್ಲ ಎಂದು ಘೋಷಿಸಿದ್ದರು. ರಜನಿಕಾಂತ್ ಮೂರು ದಿನಗಳ ಕಾಲ ಚಿಕಿತ್ಸೆಗೆ ಒಳಗಾದ ನಂತರ ಅವರು ತಮ್ಮ ಚೆನ್ನೈ ನಿವಾಸಕ್ಕೆ ಮರಳಿದ್ದರು.
2021 ರ ತಮಿಳುನಾಡು ಚುನಾವಣೆಗೆ ರಾಜಕೀಯ ಧುಮುಕುವ ತನ್ನ ಯೋಜನೆಗಳೊಂದಿಗೆ ಮುಂದುವರಿಯುವುದಿಲ್ಲ ಎಂದು ಹೇಳಿದ್ದಾರೆ. ಡಿಸೆಂಬರ್ 31, 2017 ರಂದು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ರಜನಿಕಾಂತ್ ರಜಿನಿ ಮಕ್ಕಳ್ ಮಂಡ್ರಂ ಅನ್ನು ಘೋಷಿಸಿದರು. ಆದಾಗ್ಯೂ, ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರು ರಜಿನಿ ಮಕ್ಕಳ್ ಮಂಡ್ರಂ ಅನ್ನು ವಿಸರ್ಜಿಸಿದರು.