ನವದೆಹಲಿ: ಕೇರಳ ಕೇಡರ್ನ ಹಿರಿಯ ಅಧಿಕಾರಿ ಮತ್ತು 1989-ಬ್ಯಾಚ್ ಐಎಎಸ್ ಅಧಿಕಾರಿ ರಾಜೇಶ್ ಕುಮಾರ್ ಸಿಂಗ್ ಅವರು ಶುಕ್ರವಾರ ಭಾರತದ ರಕ್ಷಣಾ ಕಾರ್ಯದರ್ಶಿಯಾಗಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡರು.
ಸಿಂಗ್ ಅವರು ಸೌತ್ ಬ್ಲಾಕ್ನಲ್ಲಿರುವ ರಕ್ಷಣಾ ಸಚಿವಾಲಯದ ಪ್ರಧಾನ ಕಛೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಅಧಿಕಾರ ಸ್ವೀಕರಿಸುವ ಮುನ್ನ ರಾಷ್ಟ್ರದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು.
ಸಿಂಗ್ ಅವರು ಆಗಸ್ಟ್ 20 ರಿಂದ ವಿಶೇಷ ಕರ್ತವ್ಯದ ಅಧಿಕಾರಿಯಾಗಿ(ರಕ್ಷಣಾ ಕಾರ್ಯದರ್ಶಿ-ನಿಯೋಜಿತ) ಸೇವೆ ಸಲ್ಲಿಸಿದ್ದಾರೆ. ದಶಕಗಳ ಆಡಳಿತಾತ್ಮಕ ಅನುಭವವ ಹೊಂದಿರುವ ಅವರು ರಕ್ಷಣಾ ಕಾರ್ಯದರ್ಶಿಯಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ತಾಯ್ನಾಡಿನ ಸೇವೆಯಲ್ಲಿ ಅತ್ಯುನ್ನತ ತ್ಯಾಗ ಮಾಡುವ ನಮ್ಮ ವೀರ ಸೈನಿಕರಿಗೆ ರಾಷ್ಟ್ರವು ಎಂದೆಂದಿಗೂ ಋಣಿಯಾಗಿದೆ. ಅವರ ಅಸಾಧಾರಣ ಶೌರ್ಯ ಮತ್ತು ತ್ಯಾಗವು ಭಾರತವನ್ನು ಸುರಕ್ಷಿತ ಮತ್ತು ಸಮೃದ್ಧ ರಾಷ್ಟ್ರವನ್ನಾಗಿ ಮಾಡಲು ನಮಗೆ ಶಕ್ತಿ ಮತ್ತು ಸ್ಫೂರ್ತಿಯ ಮೂಲವಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ರಾಜೇಶ್ ಕುಮಾರ್ ಸಿಂಗ್ ಅವರು ಏಪ್ರಿಲ್ 24, 2023 ರಿಂದ ಆಗಸ್ಟ್ 20, 2024 ರವರೆಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯಲ್ಲಿ ಕಾರ್ಯದರ್ಶಿ ಹುದ್ದೆಯನ್ನು ಹೊಂದಿದ್ದರು. ಅದಕ್ಕೂ ಮೊದಲು ಅವರು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು.
ನಗರಾಭಿವೃದ್ಧಿ ಸಚಿವಾಲಯದಲ್ಲಿ ಮತ್ತು ನಗರ ಸಾರಿಗೆಯ ನಿರ್ದೇಶಕರು ಸೇರಿದಂತೆ ಕೇಂದ್ರ ಸರ್ಕಾರದಲ್ಲಿ ಅನೇಕ ಇತರ ಪ್ರಮುಖ ಹುದ್ದೆಗಳನ್ನು ಹೊಂದಿದ್ದಾರೆ. ದೆಹಲಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರು(ಭೂಮಿಗಳು); ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿ, ಮತ್ತು ಭಾರತೀಯ ಆಹಾರ ನಿಗಮದ ಮುಖ್ಯ ವಿಜಿಲೆನ್ಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ.
ಅವರು ಕೇರಳ ಸರ್ಕಾರದಲ್ಲಿ ನಗರಾಭಿವೃದ್ಧಿ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಗುರುವಾರ ನಿವೃತ್ತರಾದ ಆಂಧ್ರಪ್ರದೇಶ ಕೇಡರ್ನ 1988-ಬ್ಯಾಚ್ ಐಎಎಸ್ ಅಧಿಕಾರಿ ಗಿರಿಧರ್ ಅರಮನೆ ಉತ್ತರಾಧಿಕಾರಿಯಾಗಿ ಸಿಂಗ್ ಅಧಿಕಾರ ವಹಿಸಿಕೊಂಡರು.