alex Certify ಶಾಪಗ್ರಸ್ತವಾಗಿದ್ದ ಖ್ಯಾತ ನಟನ ಬಂಗಲೆ; ಖರೀದಿಸಿದವರೆಲ್ಲರಿಗೂ ದುರಾದೃಷ್ಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಪಗ್ರಸ್ತವಾಗಿದ್ದ ಖ್ಯಾತ ನಟನ ಬಂಗಲೆ; ಖರೀದಿಸಿದವರೆಲ್ಲರಿಗೂ ದುರಾದೃಷ್ಟ…!

Rajesh Khanna's Bungalow, 'Ashirwad' Was Cursed And Haunted, It Bought Misfortune To Its Owners?

ರಾಜೇಶ್ ಖನ್ನಾ 70 ರ ದಶಕದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಬಾಲಿವುಡ್ ನ ಮೊದಲ ಸೂಪರ್‌ಸ್ಟಾರ್. ಅಂದಿನ ಸಮಯದಲ್ಲಿ ಅವರ ಸೂಪರ್‌ಸ್ಟಾರ್‌ಡಮ್ ಅನ್ನು ಬೇರೆ ಯಾವ ನಟರೂ ಮೀರಿಸಲು ಸಾಧ್ಯವಿರಲಿಲ್ಲ. ಆಗ ಅವರ ಮಹಿಳಾ ಅಭಿಮಾನಿಗಳು ಅವರಿಗೆ ರಕ್ತದಿಂದ ಪತ್ರಗಳನ್ನು ಬರೆಯುತ್ತಿದ್ದರು. ಇಷ್ಟು ಮಾತ್ರವಲ್ಲದೆ ಅವರ ಕಾರನ್ನು ಎಲ್ಲಿ ನಿಲ್ಲಿಸಿದರೂ ಅದರ ಮೇಲೆ ಲಿಪ್ ಸ್ಟಿಕ್ ಗುರುತುಗಳು ಕಾಣುತ್ತಿದ್ದವು. ರಾಜೇಶ್ ಖನ್ನಾ 70 ರ ದಶಕದ ಆರಂಭದಲ್ಲಿ ಸತತ 17 ಹಿಟ್ ಚಲನಚಿತ್ರಗಳನ್ನು ನೀಡಿದ್ದರು. ಈಗಲೂ ಅವರನ್ನು ಬಾಲಿವುಡ್ ನ ದಂತಕಥೆ ಎಂದೇ ಪರಿಗಣಿಸಲಾಗಿದೆ. ಆದಾಗ್ಯೂ, ರಾಜೇಶ್ ಖನ್ನಾ ಅವರ ಚಲನಚಿತ್ರಗಳು ಒಂದು ಹಂತದಲ್ಲಿ ಹೆಸರು ಮಾಡುವುದನ್ನ ನಿಲ್ಲಿಸಿದವು ಅವರ ವೈಯಕ್ತಿಯ ಜೀವನವೂ ಸಹ ಹಳ್ಳ ಹಿಡಿಯಿತು.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು 2012 ರಲ್ಲಿ ತಮ್ಮ 69 ನೇ ವಯಸ್ಸಿನಲ್ಲಿ ತಮ್ಮ ಪ್ರಸಿದ್ಧ ಬಂಗಲೆಯಾದ ಆಶೀರ್ವಾದ್‌ನಲ್ಲಿ ನಿಧನರಾದರು. ಆ ದಿನಗಳಲ್ಲಿ ರಾಜೇಶ್ ಖನ್ನಾ ಖರೀದಿಸಿದ ಬಂಗಲೆಯಲ್ಲಿ ದೆವ್ವವಿತ್ತು ಎನ್ನಲಾಗುತ್ತದೆ, ಆ ಮನೆಯ ಮಾಲೀಕರಿಗೆಲ್ಲಾ ಅದು ದುರಾದೃಷ್ಟದ ಮನೆಯಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಬಗ್ಗೆ ಘಟನೆಗಳನ್ನು ಮೆಲುಕು ಹಾಕಿ ನೋಡಿದಾಗ, ಮುಂಬೈ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿರುವ ಅದ್ದೂರಿ ಬಂಗಲೆಯ ಮೊದಲ ಮಾಲೀಕರು 50 ರ ದಶಕದಲ್ಲಿದ್ದ ಪ್ರಸಿದ್ಧ ನಟ ಭರತ್ ಭೂಷಣ್. ಅವರ ಚಲನಚಿತ್ರಗಳಾದ ಬೈಜು ಬಾವ್ರಾ, ಮಿರ್ಜಾ ಗಾಲಿಬ್, ಗೇಟ್‌ವೇ ಆಫ್ ಇಂಡಿಯಾ ಮತ್ತು ಇನ್ನೂ ಅನೇಕ ಚಲನಚಿತ್ರಗಳು ಆ ಕಾಲದ ಸೂಪರ್‌ ಹಿಟ್‌ಗಳೆಂದು ಪರಿಗಣಿಸಲ್ಪಟ್ಟವು. ಆದಾಗ್ಯೂ ಬಳಿಕ ಅವರ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತವು. ಬಳಿಕ ಅವರು ಸಾಲ ಮಾಡಬೇಕಾಯ್ತು. ಅಂತಿಮವಾಗಿ, ಅವರು ಭಾರೀ ನಷ್ಟದಿಂದಾಗಿ ತನ್ನ ಮನೆಯನ್ನು ಮಾರಾಟ ಮಾಡಬೇಕಾಯಿತು.

ಭೂತವಿದೆ ಎಂದು ವದಂತಿ ಹಬ್ಬಿದ್ದ ಬಂಗಲೆಯನ್ನು ಭರತ್ ಭೂಷಣ್ ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾದಾಗ ಯಾರೂ ಕೂಡ ಖರೀದಿಸಲು ಸಿದ್ಧರಿರಲಿಲ್ಲ. ಆದರೆ ಭೂತದ ವಿಚಾರದಲ್ಲಿ ನಂಬಿಕೆಯಿಲ್ಲದ ನಟ ರಾಜೇಂದ್ರ ಕುಮಾರ್ ಕೇವಲ 60,000. ರೂ. ನೀಡಿ ಬಂಗಲೆ ಖರೀದಿಸಿದರು. ಅವರ ನಟ-ಸ್ನೇಹಿತ ಮನೋಜ್ ಕುಮಾರ್ ಬಂಗಲೆಗೆ ಸ್ಥಳಾಂತರಗೊಳ್ಳುವ ಮೊದಲು ಪೂಜೆ ಮಾಡುವಂತೆ ರಾಜೇಂದ್ರ ಕುಮಾರ್ ಅವರಿಗೆ ಸಲಹೆ ನೀಡಿದ್ದರಂತೆ. ನಂತರ ರಾಜೇಂದ್ರ ಕುಮಾರ್ ಅವರು ತಮ್ಮ ಮಗಳ ಹೆಸರನ್ನು ‘ಡಿಂಪಲ್’ ಎಂದು ಬಂಗಲೆಗೆ ನಾಮಕರಣ ಮಾಡಿದರು. ಬಳಿಕ ರಾಜೇಂದ್ರ ಕುಮಾರ್ ಅವರ ಚಲನಚಿತ್ರಗಳು 1968-69 ರ ಸುಮಾರಿಗೆ ಹೆಸರು ಮಾಡಲಿಲ್ಲ, ಇದರಿಂದ ಅವರು ದೊಡ್ಡ ನಷ್ಟವನ್ನು ಅನುಭವಿಸಿದರು. ಇತಿಹಾಸವು ಪುನರಾವರ್ತನೆಯಾಗಿ ಅವರೂ ಕೂಡ ಬಂಗಲೆ ಮಾರಾಟ ಮಾಡಬೇಕಾಯಿತು.

ರಾಜೇಂದ್ರ ಕುಮಾರ್ ಬಂಗಲೆಯನ್ನು ಮಾರಾಟ ಮಾಡಲು ಯೋಜಿಸುತ್ತಿದ್ದಾರೆ ಎಂದು ತಿಳಿದ ರಾಜೇಶ್ ಖನ್ನಾ ಅವರಿಗೆ ಮನವರಿಕೆ ಮಾಡಿಕೊಟ್ಟು ಅಂತಿಮವಾಗಿ 3.5 ಲಕ್ಷ ರೂ.ಗೆ ಖರೀದಿಸಿದರು. ಬಂಗಲೆಗೆ ಅವರು ಆಶೀರ್ವಾದ್ ಎಂದು ಮರುನಾಮಕರಣ ಮಾಡಿದರು. ಅವರು ತಮ್ಮ ಐಷಾರಾಮಿ ಬಂಗಲೆಯಲ್ಲಿದ್ದುಕೊಂಡೇ ಚಿತ್ರರಂಗದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದರು ಇದೇ ವೇಳೆ ಡಿಂಪಲ್ ಕಪಾಡಿಯಾ ಅವರನ್ನು ವಿವಾಹವಾದರು. ಅವರ ಪುತ್ರಿಯರಾದ ಟ್ವಿಂಕಲ್ ಮತ್ತು ರಿಂಕು ಇದೇ ಮನೆಯಲ್ಲಿ ಜನಿಸಿದರು. ಆದಾಗ್ಯೂ, ರಾಜೇಶ್ ಖನ್ನಾ ಅವರ ವೈವಾಹಿಕ ಜೀವನವು ಬೇರೊಂದು ತಿರುವು ಪಡೆದು ಡಿಂಪಲ್ ಕಪಾಡಿಯಾ, ರಾಜೇಶ್ ಖನ್ನಾರನ್ನು ತೊರೆದರು.

70 ರ ದಶಕದ ಅಂತ್ಯದ ವೇಳೆಗೆ ಅವರ ಚಲನಚಿತ್ರಗಳು ಹೆಚ್ಚು ಹೆಸರು ಮಾಡಲಿಲ್ಲ. ಈ ವೇಳೆಗಾಗಲೇ ಅಮಿತಾಬ್ ಬಚ್ಚನ್ ಬಾಲಿವುಡ್ ಪ್ರವೇಶಿಸಿ ಹೆಸರು ಮಾಡುತ್ತಿದ್ದರು. ಕೆಲಸವಿಲ್ಲದ ರಾಜೇಶ್ ಖನ್ನಾ ಅವರು ತಮ್ಮ ಬಂಗಲೆಯ ಕೊಠಡಿಯೊಂದರಲ್ಲಿ ವಿಸ್ಕಿ ಕುಡಿಯುತ್ತಾ ವಿಶ್ರಾಂತಿ ಕಳೆಯುತ್ತಿದ್ದರಂತೆ. ಆದರೆ ಅವರು ಎಂದಿಗೂ ತಮಗೆ ವಿಶೇಷವೆನಿಸಿದ ಅಶೀರ್ವಾದ ಬಂಗಲೆಯನ್ನು ಮಾರಾಟ ಮಾಡಲಿಲ್ಲ.

ಆದರೆ ರಾಜೇಶ್ ಖನ್ನಾ ಅವರ ನಿಧನದ ನಂತರ ಅವರ ಪುತ್ರಿಯರಾದ ಟ್ವಿಂಕಲ್ ಖನ್ನಾ ಮತ್ತು ರಿಂಕು ಖನ್ನಾ ಬಂಗಲೆಯನ್ನು ಮಾರಾಟ ಮಾಡಲು ನಿರ್ಧರಿಸಿದರು. 2014 ರಲ್ಲಿ 603 ಚದರ ಮೀಟರ್ ವಿಸ್ತೀರ್ಣದ ಆಶೀರ್ವಾದ್ ಬಂಗಲೆಯನ್ನು ಕೈಗಾರಿಕೋದ್ಯಮಿ ಶಶಿ ಕಿರಣ್ ಶೆಟ್ಟಿಗೆ 90 ಕೋಟಿ ರೂ. ಗೆ ಮಾರಿ ಹಣವನ್ನ ಸೋದರಿಯರು ಹಂಚಿಕೊಂಡರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...