ಜೈಪುರ: ನಿಂತಿದ್ದ ಟ್ರಕ್ ಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ.
ಸುಜನ್‌ಗಢ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಚುರು ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ನಾಯಕ್ ತಿಳಿಸಿದ್ದಾರೆ.
ಚುನಾವಣಾ ಸಭೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ತಾರಾನಗರಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಐವರು ಪೊಲೀಸರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಪೊಲೀಸರನ್ನು ಖಿನ್ವಸರ್ ಪೊಲೀಸ್ ಠಾಣೆಯ ಎಎಸ್‌ಐ ರಾಮಚಂದ್ರ, ಕಾನ್‌ಸ್ಟೆಬಲ್‌ಗಳಾದ ಕುಂಭರಾಮ್, ಸುರೇಶ್ ಮೀನಾ, ಥನರಾಮ್ ಮತ್ತು ಮಹೇಂದ್ರ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರ ಸಂತಾಪ ಸೂಚಿಸಿದ್ದಾರೆ. “ಇಂದು ಮುಂಜಾನೆ, ಚುರುವಿನ ಸುಜನ್‌ಗಢ್ ಸದರ್ ಪ್ರದೇಶದಲ್ಲಿ ವಾಹನ ಅಪಘಾತದಲ್ಲಿ ಪೊಲೀಸರ ಸಾವುನೋವುಗಳ ಬಗ್ಗೆ ದುಃಖದ ಸುದ್ದಿ ಬಂದಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿದ ಪೊಲೀಸರ ಕುಟುಂಬಗಳಿಗೆ ದು:ಖ ಭರಿಸುವ ಶಕ್ತಿ ದೇವರು ನೀಡಲಿ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.