ರಾಜಸ್ಥಾನದ ಭಿಲ್ವಾರಾದಲ್ಲಿ 24 ವರ್ಷದ ಮಹಿಳೆಯ ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿದ್ದು, ಪರೀಕ್ಷೆಯಲ್ಲಿ ವಿಫಲವಾಗಿದ್ದಾಳೆ ಎಂದು ಆರೋಪಿಸಿ ಚಿತ್ರಹಿಂಸೆ ನೀಡಲಾಗಿದೆ. ಸಂಬಂಧಿಕರು ಆಕೆಯನ್ನು ಥಳಿಸಿದ್ದಲ್ಲದೇ, ಪಂಚಾಯಿತಿ ಸೇರಿಸಿ ಆಕೆಯ ಕುಟುಂಬಕ್ಕೆ 10 ಲಕ್ಷ ರೂ. ದಂಡ ಹಾಕಲಾಗಿದೆ.
ಶನಿವಾರದಂದು ದಾಖಲಾದ ಪ್ರಕರಣದ ಪ್ರಕಾರ, ಮೇ 11 ರಂದು ಭಿಲ್ವಾರಾದಲ್ಲಿ ತನ್ನ ಮದುವೆಯ ಮೊದಲ ದಿನದಂದು ಕನ್ಯತ್ವ ಪರೀಕ್ಷೆಗೆ ಒಳಗಾಗುವಂತೆ ಮಾಡಲಾಗಿತ್ತು ಎಂದು ಮಹಿಳೆ ಆರೋಪಿಸಿದ್ದಾರೆ.
ಎಫ್‌ಐಆರ್ ನಲ್ಲಿ ತಿಳಿಸಿರುವಂತೆ ಆಕೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ಪತಿ ಮತ್ತು ಅವನ ಕುಟುಂಬದವರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಮೇ 31 ರಂದು ಸ್ಥಳೀಯ ದೇವಸ್ಥಾನದಲ್ಲಿ ಖಾಪ್ ಪಂಚಾಯತಿ ಕರೆದಿದ್ದು, ಪಂಚಾಯಿತಿಯವರು ಮಹಿಳೆಯ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ತಿಳಿಸಿದ್ದಾರೆ.
ಮದುವೆಗೂ ಮುನ್ನ ತನ್ನ ನೆರೆಹೊರೆಯವ ಅತ್ಯಾಚಾರವೆಸಗಿರುವುದಾಗಿ ಮಹಿಳೆ ತನ್ನ ಅತ್ತೆಗೆ ತಿಳಿಸಿದ್ದಾಳೆ. ಸುಭಾಷ್ ನಗರ ಪೊಲೀಸ್ ಠಾಣೆಯಲ್ಲಿ ಮದುವೆಗೆ ಮೊದಲೇ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಸ್ಟೇಷನ್ ಹೌಸ್ ಆಫೀಸರ್(ಬಾಗೋರ್) ಆಯೂಬ್ ಖಾನ್ ಅವರು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾದ ನಂತರ ಪೊಲೀಸರು ತನಿಖೆ ನಡೆಸಿದ್ದಾರೆ. ಶನಿವಾರ ಆಕೆಯ ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಂಸಿ ಅಲೆಮಾರಿ ಸಮುದಾಯದವರಲ್ಲಿ ಪ್ರಚಲಿತವಿರುವ ‘ಕುಕಾಡಿ ಪ್ರಾತ’ ಪದ್ಧತಿಗೆ ಮಹಿಳೆ ಬಲಿಯಾಗಿದ್ದಾಳೆ. ಇದು ರಾಜಸ್ಥಾನದಲ್ಲಿ ಕುಕಾಡಿ ಪ್ರಾತ ಎಂದು ಕರೆಯಲ್ಪಡುವ ಸಾಮಾಜಿಕ ಅನಿಷ್ಟವಾಗಿದೆ. ವಿಷಯ ಬೆಳಕಿಗೆ ಬಂದ ನಂತರ ವಾಸ್ತವ ವರದಿಯನ್ನು ಸಲ್ಲಿಸಲಾಗಿದೆ ಮತ್ತು ಪ್ರಕರಣ ದಾಖಲಿಸಲಾಗಿದೆ ಎಂದು ಮಂಡಲ ಡಿಎಸ್ಪಿ ಸುರೇಂದ್ರಕುಮಾರ್ ತಿಳಿಸಿದ್ದಾರೆ.
ಮದುವೆಗೂ ಮುನ್ನ ನಡೆದ ಅತ್ಯಾಚಾರ ಘಟನೆಯನ್ನು ತನ್ನ ಅತ್ತೆಯ ಬಳಿ ಹೇಳಿಕೊಂಡಿದ್ದೆ ಎಂದು ಮಹಿಳೆ ತಿಳಿಸಿದ್ದಾಳೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.