ತನ್ನ ನಾಲ್ವರು ಮಕ್ಕಳನ್ನು ಸಾಯಿಸಿ ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ
ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಲಿ ಸ್ಟೇಷನ್ ಪ್ರದೇಶದಲ್ಲಿನ ತನ್ನ ಮನೆಯಲ್ಲಿ ತನ್ನ ನಾಲ್ವರು ಮಕ್ಕಳನ್ನು ಭತ್ತದ ಕಣಜದಲ್ಲಿ ಲಾಕ್ ಮಾಡಿದ ನಂತರ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರು ಎಲ್ಲಾ ಐದು ಮೃತದೇಹಗಳನ್ನು ಕಲ್ಯಾಣಪುರಿ ಶವಾಗಾರಕ್ಕೆ ರವಾನಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಎಫ್‌ಎಸ್‌ಎಲ್ ತಂಡ ಪುರಾವೆ ಸಂಗ್ರಹಿಸಿದೆ. ಮೃತರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದು, ಅವರು ಆಗಮಿಸಿದ ನಂತರ ಹೆಚ್ಚಿನ ತನಿಖೆ ನಡೆಸಲಾಗುವುದು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಜೇಥಾ ರಾಮ್ ಅವರ ಪತ್ನಿ ಊರ್ಮಿಳಾ ಶನಿವಾರ ತನ್ನ ನಾಲ್ಕು ಮಕ್ಕಳೊಂದಿಗೆ ಮನೆಯಲ್ಲಿದ್ದರು. ಆಕೆಯ ಪತಿ ಜೇಥರಾಮ್ ಕೂಲಿಗಾಗಿ ಜೋಧಪುರಕ್ಕೆ ಹೋಗಿದ್ದರು. ಮಧ್ಯಾಹ್ನ ಊರ್ಮಿಳಾ ತನ್ನ ಮಕ್ಕಳಾದ ಭಾವನಾ (8), ವಿಕ್ರಮ್ (5), ವಿಮಲಾ (3), ಮತ್ತು ಮನಿಶಾ (2) ಅವರನ್ನು ಭತ್ತದ ಕಣಜಕ್ಕೆ ಹಾಕಿ ಬೀಗ ಹಾಕಿದರು.
ಬಳಿಕ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಂಜೆಯವರೆಗೂ ಮಕ್ಕಳು ಮತ್ತು ಮಹಿಳೆಯರು ಕಾಣದಿದ್ದಾಗ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಅವರ ಸಂಬಂಧಿಕರು ಊರ್ಮಿಳಾ ಅವರ ಮನೆಗೆ ಭೇಟಿ ನೀಡಿದಾಗ ಅವರು ನೇಣು ಬಿಗಿದುಕೊಂಡಿರುವುದು ಮತ್ತು ಅವರ ಮಕ್ಕಳನ್ನ ಭತ್ತದ ಕಣಜದೊಳಕ್ಕೆ ಹಾಕಿ ಬೀಗ ಹಾಕಿರುವುದು ಕಂಡುಬಂದಿದೆ. ಗ್ರಾಮಸ್ಥರು ಸೇರಿ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಕಲ್ಯಾಣಪುರ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ಪತಿ ಮತ್ತು ಅತ್ತೆ – ಮಾವ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮೃತ ಮಹಿಳೆಯ ಸಂಬಂಧಿಕರು ದುರ್ಗಾರಾಮ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ