ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ 26 ವರ್ಷದ ಮಹಿಳೆ ಮೇಲೆ ಆಕೆಯ ಗಂಡ ಮತ್ತು ಮಕ್ಕಳ ಮುಂದೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ದಲಿತ ಮಹಿಳೆಯ ಪತಿಗೂ ಥಳಿಸಲಾಗಿದೆ. ಪೊಲೀಸರು ಅತ್ಯಾಚಾರ, ದೈಹಿಕ ಹಲ್ಲೆ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ಮಹಿಳೆ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಗದ್ದೆಯಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಆರು ಮಂದಿ ಅಡ್ಡಗಟ್ಟಿ ಬಂದೂಕು ತೋರಿಸಿ ಬೆದರಿಸಿದ್ದಾರೆ. ಅವರು ಮಹಿಳೆಯ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಆರು ಆರೋಪಿಗಳಲ್ಲಿ ಇಬ್ಬರು ಆಕೆಯ ಮಕ್ಕಳ ಮುಂದೆ ಅತ್ಯಾಚಾರವೆಸಗಿದ್ದಾರೆ. ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ಕುರಿತು ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಡಾ. ಸತೀಶ್ ಪೂನಿಯಾ, ಈ ಘಟನೆಯಿಂದಾಗಿ ರಾಜಸ್ಥಾನ ಮತ್ತೊಮ್ಮೆ ಮುಜುಗರಕ್ಕೊಳಗಾಗಿದೆ. ಅಶೋಕ್ ಗೆಹ್ಲೋಟ್ ಅವರ ಆಳ್ವಿಕೆಯಲ್ಲಿ ಕ್ರಿಮಿನಲ್ ಗಳ ತಾಲಿಬಾನಿ ಆಡಳಿತವಿದೆ ಎಂದು ತೋರುತ್ತದೆ ಎಂದು ಟೀಕಿಸಿದ್ದಾರೆ.